ಹಾಸನ: ಸಾರ್ವಜನಿಕರಿಗೆ ವಂಚನೆ, ಭ್ರಷ್ಟಾಚಾರ ಆರೋಪಕ್ಕೆ ತುತ್ತಾಗಿರುವ ಅಗಿಲೇ ಯೋಗೇಶ್ ಅವರನ್ನು ಯಾವುದೇ ಕಾರಣಕ್ಕೂ ಎಎಪಿ ಪಕ್ಷದಿಂದ ಟಿಕೆಟ್ ನೀಡಬಾರದು ಎಂದು ರಾಜ್ಯ ಸಮಿತಿಗೆ ಮನವಿ ಮಾಡಿರುವುದಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಪಿ ಶಿವಕುಮಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಮ್ ಆದ್ಮಿ ಪಾರ್ಟಿ ಪ್ರಾಮಾಣಿಕ ಪಕ್ಷವಾಗಿದ್ದು ದೆಹಲಿ ಪಂಜಾಬಿನಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಶಿಕ್ಷಣ ಆರೋಗ್ಯ ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ ಎಂಬ ಯೋಜನೆ ರೀತಿಯ ಉತ್ತಮ ಕೆಲಸವನ್ನು ಮಾಡುತ್ತಾ ಮುನ್ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಪಕ್ಷಕ್ಕೆ ಉತ್ತಮ ಅಭ್ಯರ್ಥಿಗಳ ಆಯ್ಕೆ ಅತಿ ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷಾಂತರ ರಾಜಕೀಯ ಮಾಡುತ್ತಿರುವ ಅಗಿಲೆ ಯೋಗೇಶ್ ಅವರಿಗೆ ಆಮ್ ಆದ್ಮಿ ಪಾರ್ಟಿಯಿಂದ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಸರಿಯಲ್ಲ ಎಂದರು.
ಈ ಹಿಂದೆ ಆಗಿಲೆ ಯೋಗೇಶ್ ಅವರು ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಹಾಗೂ ಚಾಮರಾಜ ನಗರದಲ್ಲಿ ಎಸ್‌ಎಲ್‌ಎಸ್ ಡೆವೆಲಪರ್ ಹೆಸರಿನಲ್ಲಿ ನಿವೇಶನ ಕೊಡುವುದಾಗಿ ನಂಬಿಸಿ 60ರಿಂದ 70 ಕೋಟಿ ಹಣವನ್ನು ಪಡೆದು ನಿವೇಶನವನ್ನು ಕೊಡದೆ ಕಟ್ಟಿರುವ ಹಣವನ್ನು ನೀಡದೆ ಸಾವಿರಾರು ಜನರಿಗೆ ಮೋಸ ಮಾಡಿರುವ ಪ್ರಕರಣಗಳು ನಡೆದಿದೆ.
ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರ ಪರಿಣಾಮ ಕೋರ್ಟ್ ಸಹ ವಂಚನೆ ಪ್ರಕರಣವನ್ನು ಪರಿಶೀಲಿಸಿ ಹಣ ಕಟ್ಟಿರುವ ಮಂದಿಗೆ ಹಣ ಅಥವಾ ನಿವೇಶನ ಹಿಂದಿರುಗಿಸುವಂತೆ ಆದೇಶವನ್ನು ಹೊರಡಿಸಿದೆ. ಹೀಗಿರುವಾಗ ಇಂತಹ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ಆಮ್ ಆದ್ಮಿ ಪಾರ್ಟಿ ಮುಂದಿನ ಚುನಾವಣೆಗೆ ಟಿಕೆಟ್ ನೀಡಬಾರದು. ಈ ಸಂಬಂಧ ರಾಜ್ಯ ಸಮಿತಿಗೆ ಪತ್ರ ಮುಖೇನ ಮನವರಿಕೆ ಮಾಡಿದ್ದು ಸದ್ಯದಲ್ಲೇ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ್ ಕೇಜ್ರಿವಾಲ ಅವರನ್ನು ಭೇಟಿ ಮಾಡಿ ಯೋಗೇಶ್ ಮೇಲಿನ ಭ್ರಷ್ಟಾಚಾರದ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು.