ಅರಸೀಕೆರೆ: ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿದ್ದಲ್ಲ, ಕಳ್ಳ ದಾರಿಯಿಂದ ಅಧಿಕಾರ ಹಿಡಿದಿದೆ. ಹಣ ನೀಡಿ ಶಾಸಕರನ್ನು ಖರೀದಿಸಿ ಸರ್ಕಾರವನ್ನು ರಚಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ ಶಿವಲಿಂಗೇಗೌಡರ ಪರ ಮತಯಾಚನೆ ಮಾಡಿದ ಅವರು, ನಾವು ರಾಜ್ಯದ ಜನರಿಗೆ ನಮ್ಮ ಐದು ಗ್ಯಾರಂಟಿಗಳು, ಯೋಜನೆಗಳನ್ನು ಹೇಳಿದ್ದೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಿ? ಕಮಿಷನ್ ಅನ್ನು ಶೇ. 10ರಿಂದ ಶೇ. 60ಕ್ಕೆ ಏರಿಸುತ್ತೀರಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನೆಪಗಳನ್ನು ಹೇಳಬಾರದು, ಭ್ರಷ್ಟಾಚಾರದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಪ್ರವಾಹದ ಸಂದರ್ಭದಲ್ಲಿ ಏನು ಮಾಡಿದ್ದೀರಿ? ನಿರುದ್ಯೋಗ ನಿವಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ? ಮುಂದಿನ ಐದು ವರ್ಷ ಏನು ಮಾಡುತ್ತೀರಿ? ಎಂಬುದನ್ನು ಪ್ರಧಾನಿ ಅವರು ರಾಜ್ಯಕ್ಕೆ ಬಂದಾಗ ಜನರಿಗೆ ಹೇಳಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿಯವರಿಗೆ 40 ಸಂಖ್ಯೆಯ ಮೇಲೆ ಬಹಳ ಪ್ರೀತಿ, ಎಲ್ಲಿ ಹೋದರೂ 40 ಸಂಖ್ಯೆಯನ್ನು ಪ್ರಯೋಗಿಸುತ್ತಾರೆ. ಈ ಬಾರಿ ಇವರಿಗೆ ನೀವು 40 ಸಂಖ್ಯೆಯನ್ನು ಮತ್ತೊಮ್ಮೆ ಜ್ಞಾಪಿಸಿ 3 ವರ್ಷ ನಿಮಗೆ 10 ಸಂಖ್ಯೆಯನ್ನು ತೋರಿಸಿದವರಿಗೆ 40 ಸ್ಥಾನಗಳನ್ನು ಕೊಡಿ. ಕಾಂಗ್ರೆಸ್‌ಗೆ 150 ಸ್ಥಾನಗಳನ್ನು ಕೊಡಬೇಕು. ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬಂದರೆ, ಬಿಜೆಪಿ ಮತ್ತೆ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಲಿದೆ. ಮುಂದೆ 40ರಿಂದ ಶೇ. 60 ಕಮಿಷನ್ ಮಾಡುತ್ತಾರೆ. ಅದಕ್ಕಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿ, ಬಿಜೆಪಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ಯಾವ ಮಕ್ಕಳನ್ನು ಕೇಳಿದರೂ, ಇಲ್ಲಿರುವ ಸರ್ಕಾರ ಶೇ. 40 ಕಮಿಷನ್ ಸರ್ಕಾರ ಎಂದು ಹೇಳುತ್ತಾರೆ. ಕರ್ನಾಟಕದ ಪ್ರತಿಯೊಬ್ಬರಿಗೂ ಗೊತ್ತಿದೆ. ಗುತ್ತಿಗೆದಾರರ ಸಂಘದವರೂ ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ ಇರುವ ಸರ್ಕಾರ ಶೇ. 40 ಕಮಿಷನ್ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಪತ್ರ ಓದಿದರೂ, ಇದುವರೆಗೆ ಉತ್ತರ ನೀಡಿಲ್ಲ. ಗದಗಿನ ಸ್ವಾಮೀಜಿಯೊಬ್ಬರು ಶೇ. 30 ಕಮಿಷನ್ ಪಡೆದಿದ್ದು, ಶೇ. 10 ರಿಯಾಯಿತಿ ನೀಡಲಾಗಿದೆ ಎಂದು ದೂರಿದ್ದಾರೆ. ಶಾಸಕರ ಪುತ್ರ ಕೋಟಿ ನಗದಿನೊಂದಿಗೆ ಸಿಕ್ಕಿದ್ದಾರೆ, ನೇಮಕಾತಿ ಹಗರಣಗಳೂ ನಡೆದಿವೆ ಎಂದು ಹೇಳಿದರು.
ಮೊದಲು ಸರ್ಕಾರವನ್ನು ಕಳವು ಮಾಡಿದ ಬಿಜೆಪಿ ಸರ್ಕಾರ ಬಳಿಕ ನಿಮ್ಮಿಂದ ಕಳ್ಳತನ ಮಾಡುತ್ತ ಬಂದಿದೆ. ಪ್ರಧಾನಿ ಇಲ್ಲಿಗೆ ಬಂದು ಭಾಷಣ ಮಾಡುತ್ತಾರೆ. ಆದರೆ ಸತ್ಯ ಏನೆಂದರೆ, ರಾಜ್ಯದಲ್ಲಿ 3 ವರ್ಷ ಭ್ರಷ್ಟಾಚಾರ ನಡೆದಿದ್ದು, ಶೇ. 40 ಕಮಿಷನ್ ಪಡೆಯಲಾಗಿದೆ, ಇದು ಪ್ರಧಾನಿಗೂ ಗೊತ್ತಿದೆ. ರಾಜ್ಯದ ಮಕ್ಕಳಿಗೂ ಈ ಸುದ್ದಿ ಗೊತ್ತಿರಬೇಕಾದರೆ, ಪ್ರಧಾನಿಗೂ ಗೊತ್ತಿರಬೇಕು, ಪ್ರಧಾನಿ ರಾಜ್ಯದಲ್ಲಿ 3 ವರ್ಷದಲ್ಲಿ ಭ್ರಷ್ಟಾಚಾರ ತಡೆಯಲು ಯಾವ ಕ್ರಮ ಕೈಗೊಂಡಿದ್ದಾರೆ? ಎಷ್ಟು ಮಂದಿಯ ಮೇಲೆ ಕ್ರಮ ಕೈಗೊಂಡಿದ್ದೀರಿ? ರಾಜ್ಯಕ್ಕೆ ಬಂದಾಗ ಭಾಷಣದಲ್ಲಿ ಇದನ್ನು ಒತ್ತಾಯಿಸಿ ಜನರಿಗೆ ಹೇಳಿ ಎಂದರು.
ಆದರೆ ರಾಜ್ಯಕ್ಕೆ ಬರುವ ಪ್ರಧಾನಿ, ಕಾಂಗ್ರೆಸ್ ನನ್ನ ವಿರುದ್ಧ ಆಕ್ರಮಣ ಮಾಡುತ್ತಿದೆ ಎನ್ನುತ್ತಿದ್ದಾರೆ, ಅದರ ಬದಲು ರಾಜ್ಯದ ಜನರಿಗೆ ಏನು ಮಾಡಿದ್ದೀರಿ ಎನ್ನುವುದನ್ನು ಹೇಳಿ, ಇದು ರಾಜ್ಯದ ಮಹಿಳೆಯರು, ಯುವಕರು, ರೈತರ ಪ್ರಶ್ನೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಡೆದ ಹಿಂಸೆಯ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವಿನ ನೀರಿನ ಹಂಚಿಕೆಯ ಕುರಿತು ಏನು ಕ್ರಮ ಕೈಗೊಂಡಿದ್ದೀರಿ? ಪ್ರವಾಹ ಬಂದಾಗ ಏನು ಸಹಾಯ ಮಾಡಿದ್ದೀರಿ? ನಿಮ್ಮ ಮಾತುಗಳನ್ನು ಹೇಳಿ ಜೊತೆಗೆ ಕರ್ನಾಟಕದ ಬಗ್ಗೆಯೂ ಮಾತನಾಡಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ರಾಜ್ಯದ ಮುಂದಿನ ಐದು ವರ್ಷಗಳಿಗೆ ನೀಲನಕ್ಷೆ ರೂಪಿಸಿ, ನಾಯಕರು ಹಾಗೂ ಜನರೊಂದಿಗೆ ಮಾತನಾಡಿ, ಯೋಜನೆಗಳನ್ನು ರೂಪಿಸಿದ್ದಾರೆ. ಇದರಲ್ಲಿ ಐದು ಕ್ರಾಂತಿಕಾರಿ ಯೋಜನೆಗಳನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ನಿಮ್ಮ ಜೇಬಿನಿಂದ ಕಳವು ಮಾಡಿರುವ ಹಣವನ್ನು ನಿಮಗೆ ಮತ್ತೆ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.