ಹಾಸನ: ಕಳೆದ ಐದು ವರ್ಷ ಹಾಸನ ವಿಧಾನಸಭೆ ಕ್ಷೇತ್ರದ ಶಾಸಕನಾಗಿ ನಾನು ಕೆಲಸ ಮಾಡಿದ್ದು, ಇದನ್ನು ಗಮನಿಸಿ ಜನರು ಮತ ಹಾಕುತ್ತಾರೆ ಎಂದು ಶಾಸಕ ಪ್ರೀತಂ ಜೆ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣ ಅನ್ನೋದು ಒಂದು ತಪಸ್ಸು ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಕೋವಿಡ್ ಸಂದರ್ಭದಲ್ಲಿ ಯಾರ್ಯಾರು ಎಲ್ಲೆಲ್ಲಿ ಇದ್ದರು ಎಂದು ಜನರಿಗೆ ತಿಳಿದಿದೆ. ಪ್ರೀತಂ ಗೌಡ ಮನೆ ಮನೆಗೆ ತೆರಳಿ ಸಹಾಯ ಮಾಡಿದ್ದು ಇದನ್ನೆಲ್ಲಾ ಗಮನಿಸಿ ಜನರು ಮತ ಹಾಕುತ್ತಾರೆ ಎಂದರು.
ನಾನು ಬಹಳ ಜವಾಬ್ದಾರಿಯುತವಾಗಿ ಚುನಾವಣೆ ಮಾಡುತ್ತಿದ್ದೇನೆ. ಐದು ವರ್ಷ ಏನು ಕೆಲಸ ಮಾಡಿದ್ದೀನಿ, ಮುಂದೆ ಐದು ವರ್ಷ ಏನು ಕೆಲಸ ಮಾಡ್ತಿನಿ ಅಂತ ಹೇಳ್ತಿನಿ. ನನ್ನ ಕಾರ್ಯಕರ್ತರೇ ನನ್ನ ಶಕ್ತಿ, ಪ್ರೀತಂಗೌಡನ ಮುಖ ನೋಡಿ ಐದು ಪರ್ಸೆಂಟ್ ಮತ ಬರಬಹುದು ಉಳಿದ ಓಟು ನಮ್ಮ ಕಾರ್ಯಕರ್ತರು, ಮುಖಂಡರ ಪರಿಶ್ರಮ. ಟಿಕೆಟ್ ತಗೊಂಡು ತಕ್ಷಣ ಚುನಾವಣೆ ಆಯ್ತು ಅನ್ನುವ ಭ್ರಮೆಯಿಂದ, ಬೇರೆಯವರು ಬೇರೆ ಬೇರೆ ರೀತಿ ರಾಜಕಾರಣ ಮಾಡ್ತಿರ್ತಾರೆ. ಯಾವ ರೀತಿ ಬೆಳವಣಿಗೆ ಆಗುತ್ತೆ ಕಾದು ನೋಡಿ, ಯಾವ ರೀತಿ ಚುನಾವಣೆ ಆಗಬಹುದು ಅನ್ನೋದನ್ನ ಕಾಯುತ್ತಿದ್ದೇನೆ ಎಂದರು.
ಕುಮಾರಸ್ವಾಮಿಯವರು ಅಭ್ಯರ್ಥಿ ಘೋಷಣೆ ಮಾಡಿದ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಹೋದಾಗ ಅದೇ ಮಾತು ಹೇಳುತ್ತಾರೆ ಇರೋದು 25 ದಿನ ಎಲ್ಲಾ ಕ್ಷೇತ್ರಗಳನ್ನು ಹೇಗೆ ಗಮನಿಸುತ್ತಾರೆ, ಅದೇ ರೀತಿ ಹಾಸನವನ್ನು ಗಮನಿಸುತ್ತಾರೆ. ಕುಮಾರಣ್ಣ ನನ್ನ ಹಿತೈಷಿ, ನನಗೆ ವೈಯಕ್ತಿಕವಾಗಿ ಒಳಿತನ್ನೆ ಬಯಸುವವರು, ಯಾವುದೇ ಮ್ಯಾಚ್ ಫಿಕ್ಸಿಂಗ್ ಇಲ್ಲ, ನನ್ನ ಹಿತ ಚಿಂತಕರಲ್ಲಿ ಅವರು ಕೂಡ ಒಬ್ಬರು. ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟಾಗಿದ್ದು ಉಳಿದಿದ್ದನ್ನು ಹಾಸನದ ಜನ ತೀರ್ಮಾನ ಮಾಡುತ್ತಾರೆ ಎಂದರು.