ಹಾಸನ: ನನ್ನ ಅಧಿಕಾರ ಅವಧಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2000 ಕೋಟಿಗೂ ಅಧಿಕವಾದ ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ನಡೆಸಿರುವುದಾಗಿ ಶಾಸಕ ಪ್ರೀತಂ ಜೆ ಗೌಡ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ವಿಧಾನ ಸಭಾ ಕ್ಷೇತ್ರದ ಓರ್ವ ಜನಪ್ರತಿನಿಧಿಯಾಗಿ ಜನರ ಅಪೇಕ್ಷೆಯಂತೆ ಕೆಲಸ ಮಾಡಿದ್ದೇನೆ, 2018ರಲ್ಲಿ ಸಾಮಾನ್ಯ ಕುಟುಂಬದಿಂದ ಸ್ಪರ್ಧೆ ಮಾಡಿದ ನನ್ನನ್ನು ಆಯ್ಕೆ ಮಾಡಿರುವ ಜನರಿಗೆ ಅಗತ್ಯ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ, ಇದಕ್ಕೆ ಪ್ರತಿಯಾಗಿ ಮತ್ತೊಮ್ಮೆ ನನ್ನನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ನನಗೆ ಮತ್ತೊಂದು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ಕ್ಷೇತ್ರದಲ್ಲಿ ಇಂದಿಗೂ ಸಹ ಜನರ ಸೇವೆ ಮಾಡುತ್ತಾ, ಕಸ ವಿಲೆವಾರಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ೮೦ ಫೀಟ್ ರಸ್ತೆ, ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದು, 25 ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿದ್ದು, ಉದ್ಯಾನ ವನ, ಕೆರೆ, ಅಭಿವೃದ್ಧಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಮುಂದಿನ 30 ವರ್ಷದ ಅಭಿವೃದ್ಧಿಯ ದೂರ ದೃಷ್ಟಿಯೊಂದಿಗೆ ಈ ಬಾರಿ ಸ್ಪರ್ಧೆ ಮಾಡುತ್ತಿದ್ದು, ಈ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುವ ಮೂಲಕ ಮತ್ತೊಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಹಕ್ಕು ಪತ್ರ ವಿತರಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಹಕ್ಕು ಪತ್ರ ವಿತರಿಸಿ ಈಗಾಗಲೇ ಒಂದು ವರ್ಷ ಕಳೆದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿತ್ತು ಆದರೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಆರೋಪ ಮಾಡುತ್ತಿರುವುದು ಸರಿಯಲ್ಲ ಬಡವರು ನೆಲೆ ಇಲ್ಲದವರಿಗೆ ನೆಲೆ ಕೊಡುವ ಕೆಲಸ ಮಾಡಲಾಗಿದೆ. ಹಲವು ವರ್ಷಗಳಿಂದ ಆ ಬಡವರಿಗೆ ಹಕ್ಕು ಪುತ್ರ ನೀಡದ ಹಿನ್ನಲೆಯಲ್ಲಿ ನಾನು ಅಂತಹ ಸಮಸ್ಯೆ ಪರಿಹರಿಸಿದ್ದೇನೆ.
ನಾನು ಹಕ್ಕು ಪತ್ರ ವಿತರಿಸುವ ಸಂದರ್ಭದಲ್ಲಿ ನನ್ನೊಂದಿಗಿದ್ದ ಜೆಡಿಎಸ್ ಸದಸ್ಯರು ಸಹ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ರೀತಿ ಹೊಳೆನರಸೀಪುರ, ಅರಸೀಕೆರೆಯಲ್ಲಿಯೂ ಹಕ್ಕುಪತ್ರ ವಿತರಣೆ ಮಾಡಿದ್ದು, ಓರ್ವ ಶಾಸಕನಾಗಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ನಕಲಿ ಹಕ್ಕುಪತ್ರ ನೀಡುವ ಪ್ರಮೇಯ ಬರುವುದೇ ಇಲ್ಲ ಎಂದರು. ಆರೋಪ ಮಾಡುವವರು ಬಡವರ ದಿಕ್ಕು ತಪ್ಪಿಸಿ ಅವರ ಆಸೆ ಆಕಾಂಕ್ಷೆಗಳ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಬಾರದು ಎಂದರು.
ನನ್ನ ಕ್ಷೇತ್ರದಲ್ಲಿ ನಾನು ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಮಾತನಾಡಿರುವ ಮಾತು ನನ್ನ ರಾಜಕೀಯ ವಿರೋಧಿಗಳಿಗೆಯೇ ಹೊರತು ನನ್ನ ಮತದಾರರಿಗಲ್ಲ. ಹಾಸನದ ರಾಜಕೀಯ ಸನ್ನಿವೇಶವನ್ನು ರಾಜ್ಯದ ಜನ ಸೇರಿದಂತೆ ದೆಹಲಿ ಹೈಕಮಾಂಡ್ ಗಮನಿಸುತ್ತಿದೆ. ಮಾಜಿ ಪ್ರಧಾನಿ, ಮಾಜಿ ಸಿಎಂ ಮೂರ್ನಾಲ್ಕು ಬಾರಿ, ಮೂರ್‍ನಾಲ್ಕು ಮಂದಿ ಹಾಸನ ಕ್ಷೇತ್ರಕ್ಕೆ ಬರುತ್ತಿದ್ದಾರೆ ಹಾಗೂ ಪ್ರಚಾರ ಮಾಡುತ್ತಿದ್ದಾರೆ, ಬಂದವರೆಲ್ಲ ಪ್ರೀತಂ ಜೆ ಗೌಡನನ್ನು ತೆಗೆಯಿರಿ ಎಂದು ಅಬ್ಬರಿಸುತ್ತಿದ್ದಾರೆ. ಒಬ್ಬ ಶಾಸಕನನ್ನು ಅಳಿಯಲು ಯತ್ನಿಸುತ್ತಿದ್ದಾರೆ. ಆದರೆ ನಾನು ಮತದಾರರು ಬಯಸುವ ರೀತಿ ಅಭಿವೃದ್ಧಿಗಷ್ಟೇ ಆಧ್ಯತೆ ನೀಡಿದ್ದೇನೆ. ಜನರು ಒಬ್ಬ ಶಾಸಕನಿಂದ ಬಯಸುವುದು ಅಭಿವೃದ್ದಿಯನ್ನೇ ಹೊರತು ಯಾವ ಮಾತನ್ನು ಅಲ್ಲವೆನ್ನುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಸಂದೇಶ ಮಾತ್ರ ರವಾನೆಯಾಗಲಿದೆ ಎಂದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಜಿಲ್ಲೆಗೆ ಸೀಮಿತರಲ್ಲ. ಅವರು ರಾಜ್ಯ ಮತ್ತು ರಾಷ್ಟದ ನಾಯಕರು, ಹಿರಿಯ ಮುತ್ಸದ್ದಿಗಳು, ಹಾಸನ ಬಿಜೆಪಿ ಅಭ್ಯರ್ಥಿಯನ್ನು ತೆಗೆಯಬೇಕು ಎಂದಿರುವುದು ಆಶೀರ್ವಾದ ಎಂದು ಪರಿಗಣಿಸುತ್ತೇನೆ. ನಾನು ಅವರ ಪಕ್ಷದ ವಿರೋಧಿ ಅಭ್ಯರ್ಥಿಯಾಗಿದ್ದು, ಆದ್ದರಿಂದ ನನ್ನನ್ನು ಸೋಲಿಸಬೇಕು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅವರ ಹಿರಿತನಕ್ಕೆ ನಾನು ಗೌರವ ಕೊಡುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಕುಮಾರ್, ವೇಣುಗೋಪಾಲ ಇದ್ದರು.