ಹಾಸನ: ಬಿಜೆಪಿ ಶಾಸಕ, ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರ ಪತ್ನಿ ಕಾವ್ಯಾ ಎಚ್.ಜಿ ಅವರು ಕೂಡ ಹಾಸನ ವಿಧಾನಸಭೆ ಕ್ಷೇತ್ರದಲ್ಲಿಯೇ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಕಚೇರಿಗೆ ಬೆಂಬಲಿಗರೊಂದಿಗೆ ತೆರಳಿದ ಅವರು ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಪ್ರೀತಂ ಗೌಡ ಅವರು ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ್ದು, ಈಗ ಅವರ ಪತ್ನಿ ಕಾವ್ಯಾ ಎಚ್.ಜಿ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಪ್ರೀತಂ ಗೌಡ ನಾಮಪತ್ರ ತಿರಸ್ಕೃತಗೊಂಡರೆ ಎಂಬ ಮುಂಜಾಗ್ರತಾ ಕ್ರಮವಾಗಿ ಕಾವ್ಯಾ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಕಾವ್ಯ ಪ್ರೀತಂ ಗೌಡ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪತಿ ಪ್ರೀತಂಗೌಡರಿಗಿನ್ನ ಹೆಚ್ಚು ಆಸ್ತಿ ಹೊಂದಿರುವುದಾಗಿ ತೋರಿಸಿಕೊಂಡಿದ್ದು, ಬಿಜೆಪಿ ಪಕ್ಷದಿಂದ ಒಂದು ಹಾಗೂ ಪಕ್ಷೇತರವಾಗಿ ಒಂದು ಎಂಬಂತೆ ಒಟ್ಟು ಎರಡೆರಡು ನಾಮಪತ್ರಗಳನ್ನು ಸಲ್ಲಿಸಿದ್ದು, ಪ್ರೀತಂ ಗೌಡರ ಈ ರಾಜಕೀಯ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಒಡೆದ ಮನೆಯಾಗಿದ್ದ ಜೆಡಿಎಸ್‌ನಲ್ಲಿ ಒಮ್ಮತದ ಗಾಳಿ ಬೀಸಿದ್ದು, ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಭವಾನಿ ರೇವಣ್ಣ ಸೇರಿದಂತೆ ರೇವಣ್ಣ ಕುಟುಂಬ ಬೆನ್ನಿಗೆ ನಿಂತಿದ್ದು, ಪ್ರೀತಂಗೌಡರ ರಾಜಕೀಯ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆ.
ಇದರೊಟ್ಟಿಗೆ ಜಿಲ್ಲೆಯಲ್ಲಿ ಒಡೆದ ಮನೆಯಂತಾಗಿದ್ದ ಕಾಂಗ್ರೆಸ್ ನಾಯಕರನ್ನೆಲ್ಲಾ ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಯಶಸ್ವಿಯಾಗಿದ್ದು, ಇಂದು ಹಾಸನದಲ್ಲಿ ಸಾವಿರಾರು ಅಭಿಮಾನಿಗಳ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಹಾಸನದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳನ್ನು ಸಾಬೀತು ಪಡಿಸಿದ್ಧಾರೆ. ಒಟ್ಟಿನಲ್ಲಿ ಪ್ರತಿ ಪಕ್ಷಗಳ ಒಮ್ಮತದ ಶಕ್ತಿ ಪ್ರದರ್ಶನ ಗೆಲುವಿನ ನಾಗಾಲೋಟದಲ್ಲಿದ್ದ ಪ್ರೀತಂಗೌಡರ ನಿದ್ದೆಗೆಡಿಸಿರೋದು ಮಾತ್ರ ಸುಳ್ಳಲ್ಲ.