ಬೇಲೂರು: ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಕೇವಲ ಓಟು ಬ್ಯಾಂಕ್ ಮಾಡಿಕೊಂಡು ರಾಜಕೀಯ ನಡೆಸುತ್ತಾ ಬಂದಿದೆ. ಯಾವುದೇ ಮುಸ್ಲಿಂ ನಾಯಕರಿಗೆ ಪ್ರಮುಖ ಸ್ಥಾನ-ಮಾನ ನೀಡುವಲ್ಲಿ ಸಂಪೂರ್ಣ ವಿಫಲವಾದ ಹಿನ್ನಲೆಯಲ್ಲಿ ಬಹುತೇಕ ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪಟ್ಟಣದ ಸಮೀಪದ ಬಂಟೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಕೆ.ಎಸ್ ಲಿಂಗೇಶ್ ಪರ ಚುನಾವಣೆ ಪ್ರಚಾರ ನಡೆಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಂ ಜನಾಂಗಕ್ಕೆ ಶೇ. 4ರಷ್ಟು ಮೀಸಲಾತಿಯನ್ನು ದೇವೇಗೌಡರು ನೀಡಿದರೆ ಹೊರತು ಕಾಂಗ್ರೆಸ್ ಪಕ್ಷವಲ್ಲ, ಕಾಂಗ್ರೆಸ್ ಮುಸ್ಲಿಂ ರಿಗೆ ರಕ್ಷಣೆ ನೀಡದ ಸಂದರ್ಭದಲ್ಲಿ ಕುಮಾರಣ್ಣನವರು ರಕ್ಷಣೆ ನೀಡಿದ ಬಗ್ಗೆ ಇಂದಿಗೂ ಸಾಕ್ಷಿಯಾಗಿದೆ. ಆದರೆ ಬಿಜೆಪಿ ಇಂತಹ ಮೀಸಲಾತಿಯನ್ನು ಕಿತ್ತು ಇನ್ನೊಂದು ವರ್ಗಕ್ಕೆ ಮೀಸಲಾತಿ ನೀಡುವ ಕ್ರಮವನ್ನು ಜೆಡಿಎಸ್ ಕಟುವಾಗಿ ಖಂಡಿಸಿದೆ.
ಆದರೆ ಕಾಂಗ್ರೆಸ್ ಪಕ್ಷ ಜಾಣ ಮೌನಕ್ಕೆ ಜಾರಿದ್ದು ನಿಜಕ್ಕೂ ಶೋಚನೀಯವಾಗಿದೆ ಎಂದು ಕೈ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಹಾಸನದಲ್ಲಿ ನಮ್ಮ ಸಣ್ಣ ತಪ್ಪಿನಿಂದ ಕಳೆದ ಭಾರಿ ಕ್ಷೇತ್ರ ಕೈ ಬಿಟ್ಟಿತ್ತು. ಆದರೆ 2023ರಲ್ಲಿ ಜೆಡಿಎಸ್ ಬಾವುಟ ಹಾಸನದಲ್ಲಿ ಹಾರುವುದು ಶತಸಿದ್ದವಾಗಿದೆ. ಅಂತೆಯೇ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್ ಲಿಂಗೇಶ್ ನಮ್ಮ ಸರ್ಕಾರವಿಲ್ಲದ ಸಂದರ್ಭದಲ್ಲಿ ರೂ. 1800 ಕೋಟಿ ಹಣವನ್ನು ಕ್ಷೇತ್ರಕ್ಕೆ ತರುವ ಮೂಲಕ ಬೇಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗಮನ ನೀಡಿದ್ದಾರೆ. ವಿಶೇಷವಾಗಿ ಇಂದು ಬೇಲೂರಿನಲ್ಲಿ ಮೊದಲ ಚುನಾವಣೆ ಪ್ರಚಾರವನ್ನು ನಾಗೇನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕೈಗೊಂಡಿದ್ದು ಅತೀವ ಸಂತೋಷವಾಗಿದೆ, ಲಿಂಗೇಶ್ ಗೆಲವು ಖಚಿತವೆಂದರು.
ಮಲೆನಾಡು ಭಾಗದ ಜೆಡಿಎಸ್ ಮುಖಂಡ ಎಂ.ಎ ನಾಗರಾಜು ಮಾತನಾಡಿ, ಬೇಲೂರಿನಲ್ಲಿ ಈಗಾಗಲೇ ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಆಳಿದೆ. ಆದರೆ ಅಭಿವೃದ್ಧಿ ಮಾತ್ರ ಜೆಡಿಎಸ್ ಪಕ್ಷದಿಂದ ಎಂಬ ಬಗ್ಗೆ ಇಲ್ಲಿನ ಜನತೆಗೆ ತಿಳಿದ ವಿಷಯವಾಗಿದೆ. ಜೆಡಿಎಸ್ ಪಕ್ಷ ಮಲೆನಾಡು ಪ್ರದೇಶವನ್ನು ನಿರ್ಲಕ್ಷ ಮಾಡಿದೆ ಎಂದು ವಿಪಕ್ಷಗಳು ದೂರಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಜೆಡಿಎಸ್ ಪಕ್ಷ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಎಂದು ನೋಡಲು ಖುದ್ದು ಭೇಟಿ ನೀಡಲಿ ಎಂದು ತೀರುಗೇಟು ನೀಡಿದರು.
ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಸ್ ಲಿಂಗೇಶ್ ಮಾತನಾಡಿ, ಕ್ಷೇತ್ರದ ಬಯಲುಸೀಮೆಗೆ ಈಗಾಗಲೇ ರಣಘಟ್ಟ, ಯಗಚಿ ಏತ ನೀರಾವರಿ ಮತ್ತು ಎತ್ತಿಹೊಳೆಯಿಂದ ನೀರಾವರಿ ಸೌಲಭ್ಯ ಒದಗಿಸಿದೆ. ಆದರೆ ಬಂಟೇನಹಳ್ಳಿ, ಹೆಬ್ಬಾಳು ಸೇರಿದಂತೆ ಆರು ಪಂಚಾಯಿತಿ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಒದಗಿಸಲು ಹೆಬ್ಬಾಳು ಏತ ನೀರಾವರಿ ಕ್ರೀಯಾ ಯೋಜನೆ ನಡೆಸಿದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ ಅನಂತಸುಬ್ಬರಾಯ, ಕಾರ್ಯದರ್ಶಿ ಸಿ.ಹೆಚ್ ಮಹೇಶ್, ಮುಖಂಡರಾದ ಬಾಣಸವಳ್ಳಿ ಅಶ್ವಥ, ಕನಾಯಕನಹಳ್ಳಿ ಮಹಾದೇವ್, ಬಿ.ಎಂ.ರವಿಕುಮಾರ್, ನಾಗೇಶ್, ರಫಿಕ್, ಹಗರೆ ದಿಲೀಪ್, ಎಂ ಕೆಆರ್ ನಾಗೇಶ್, ಅಬ್ದುಲ್ ಸುಭಾನ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.