ಆಲೂರು: ಪಟ್ಟಣದ ಬಿಕ್ಕೋಡು ರಸ್ತೆ, ಉಪ ನೋಂದಣಾಧಿಕಾರಿ ಕಚೇರಿ ಮುಂಭಾಗದ ಮೈದಾನದಲ್ಲಿ ಫೆ. 28ರ ಮಂಗಳವಾರ, ಕಾಂಗ್ರೆಸ್ ಪಕ್ಷದ “ಪ್ರಜಾಧ್ವನಿ” ಯಾತ್ರೆ ಹಾಗೂ ಕಾರ್ಯಕರ್ತರ ಸಮಾವೇಶವನ್ನು ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೆಪಿಸಿಸಿ ಮಾಜಿ ಸದಸ್ಯ ಹೆಮ್ಮಿಗೆ ಮೋಹನ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಲೂರು ಬ್ಲಾಕ್ ಕಾಂಗ್ರೆಸ್ ಇತಿಹಾಸದಲ್ಲಿಯೇ ಈ “ಪ್ರಜಾಧ್ವನಿ” ಕಾರ್ಯಕ್ರಮ ಮೊದಲನೇಯದಾಗಿದೆ. ಈ ಹಿಂದೆ ಪ್ರತಿ ಬಾರಿ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಾವೇಶಗಳು ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿದ್ದವು, ಆದರೆ ಮೊದಲ ಬಾರಿ ಆಲೂರಿನಲ್ಲಿ ನಡೆಯುತ್ತಿದೆ. ತಾಲೂಕಿನ ಮುಖಂಡರುಗಳಾದ ಶಾಂತಕೃಷ್ಣ, ಮುರುಳಿ ಮೋಹನ್, ಎಂ.ಹೆಚ್ ರಂಗೇಗೌಡ ಸೇರಿದಂತೆ ತಾಲೂಕಿನ ಇತರೆ ಮುಖಂಡರುಗಳು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಸಂಸದ ಡಿ.ಕೆ ಸುರೇಶ್ ಹಾಗೂ ಧ್ರುವ ನಾರಾಯಣರವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ತಾಲೂಕಿನಲ್ಲಿಯೇ ಸಮಾವೇಶ ನಡೆಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ನಡೆಸಲಾಗುತ್ತಿದೆ ಎಂದ ಅವರು ಸಮಾವೇಶಕ್ಕೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಮೂರ್ತಿ, ಶಾಂತಕೃಷ್ಣ, ರಂಗಯ್ಯ ಅಜ್ಜೇನಹಳ್ಳಿ, ಖಾಲೀದ್ ಪಾಷಾ, ಸರ್ವರ್ ಪಾಷಾ, ರಾಜಶೇಖರ, ಎಂ.ಎಚ್ ರಂಗೇಗೌಡ, ಧರ್ಮಪ್ಪ ಇದ್ದರು.