ಹೊಳೆನರಸೀಪುರ: ಜಿಲ್ಲೆಯಲ್ಲಿ ೭ಕ್ಕೆ ೭ ಸ್ಥಾನಗಳು ಜೆಡಿಎಸ್‌ಗೆ ಲಭ್ಯವಾಗಲಿದೆ. ಇಲ್ಲಿನ ಜನತೆಗೆ ನಾನು ಮನವಿ ಮಾಡುವ ಪ್ರಮೇಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಪ್ರಣಾಳಿಕೆ ಪರಿಕಲ್ಪನೆಯಡಿ ರಾಜ್ಯದಾದ್ಯಂತ ನಡೆಸಿರುವ ಪಂಚರತ್ನ ಯಾತ್ರೆ ಪಟ್ಟಣಕ್ಕೆ ಭೇಟಿ ಕೊಟ್ಟ ಸಂದರ್ಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಒಳ ಮೀಸಲಾತಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಸಮಾಜದ ಜತೆ ಎರಡೂ ರಾಷ್ಟ್ರೀಯ ಪಕ್ಷಗಳು ಚೆಲ್ಲಾಟವಾಡುತ್ತಿವೆ. ಕಾನೂನು ಬದ್ಧವಾಗಿ ತಾಂತ್ರಿಕ ನೀತಿ ಅನುಸರಿಸಿ ಆಯಾ ಸಮಾಜಗಳಿಗೆ ಮೀಸಲಾತಿ, ಒಳಮೀಸಲಾತಿ ಕೊಡಬೇಕಿದೆ. ಆಯಾ ಕುಟುಂಬಗಳ ಆರ್ಥಿಕ ವರಮಾನ, ಸ್ಥಿತಿ, ಗತಿ ಅವಲೋಕಿಸಬೇಕಿದೆ. ಮಾದ ಗದಂಡೋರ ಒಳಮೀಸಲಾತಿ ವಿಚಾರ, ಪಂಚಮಸಾಲಿಗಳು ೨ಎ ಮೀಸಲಾತಿ ಕೋರಿ ಹೋರಾಟ ನಡೆಸಿದೆ. ಕೆಲವರು ಎಸ್ಸಿ ಮೀಸಲುಗೊಳಿಸಿ ಎನ್ನುವುದು ಇರಬಹುದು. ಆ ದೇವರ ದಯೆಯಿಂದ ರಾಜ್ಯದ ಜನತೆ ಈ ದೇವೇಗೌಡರ ಮಗನ ಕೈಗೆ ಸಂಪೂರ್ಣ ೫ ವರ್ಷ ಅವಧಿಗೆ ಅಧಿಕಾರ ಕೊಟ್ಟರೆ, ಈ ಎಲ್ಲ ವಿಚಾರಕ್ಕೂ ತಾಂತ್ರಿಕ ನೀತಿ ಅನುಸರಿಸಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.
ದೇವೇಗೌಡರು ಇನ್ನೂ ಬದುಕಬೇಕು. ನನ್ನ ಮಕ್ಕಳು ಈ ರಾಜ್ಯದ ಜನತೆಯ ಬದಕನ್ನು ಕಟ್ಟಿ ತೋರಿಸಿದ್ದಾರೆ ಎಂದು ನೋಡಲು ದೇವೇಗೌಡರು ಇನ್ನೂ ಹೆಚ್ಚು ಕಾಲ ಬದುಕಿರಬೇಕು. ನನಗೆ ಸಿಕ್ಕ ಅಲ್ಪ ಅವಧಿಯ ಅಧಿಕಾರದಲ್ಲಿ ರಾಜ್ಯದ ಸಂಪೂರ್ಣ ಕೆಲಸ ಮಾಡಲಾಗಿಲ್ಲ ಎಂಬ ಕೊರಗು ದೇವೇಗೌಡರಲ್ಲೂ ಇದೆ. ಆದರೆ ಅವರ ಮಕ್ಕಳಾದ ನಾವು ರಾಜ್ಯದ ಜನತೆಯನ್ನು ಅಭ್ಯುದಯಗೊಳಿಸುವುದು ಅವರು ನೋಡಬೇಕೆಂದು ನಾನು ಮಾತುಕೊಟ್ಟು ಬಂದಿದ್ದೇನೆ ಎಂದರು.
ನನ್ನ ಸಹೋದರ ಶಾಸಕ ರೇವಣ್ಣ ಸ್ವಲ್ಪ ಒರಟು ಸ್ವಭಾವ ಆದರೂ ನಿಮ್ಮ ಹೃದಯದಲ್ಲಿ ಆತ ನೆಲಸಿದ್ದಾನೆ ಎಂಬುದನ್ನು ನಾನು ಬಲ್ಲೆ. ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣರನ್ನು ಆ ಕ್ಷೇತ್ರದ ಜನತೆ ಒಪ್ಪಿದ್ದಾರೆ. ಅರಕಲಗೂಡು ಕ್ಷೇತ್ರದಿಂದ ಮಾಜಿ ಸಚಿವ ಎ.ಮಂಜು ಈ ಬಾರಿ ನಮ್ಮನ್ನು ಬಂಬೆಲಿಸಿ ನಿಂತಿದ್ದಾರೆ. ಅರಸೀಕೆರೆ ಜನತೆ ಲಿಂಗಾಯಿತ, ಕುರುಬ ಸಮೂದಾಯಗಳೆಲ್ಲವೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದರು. ಆದರೆ ಹಾಸನ ಕ್ಷೇತ್ರದ ವಿಚಾರ ಕುರಿತು ಚಕಾರ ಎತ್ತಲಿಲ್ಲ.
ನಾನು ಪಂಚರತ್ನ ಯಾತ್ರೆ ಪ್ರಾರಂಭಿಸಿದ ದಿನಗಳಿಂದ ಪ್ರತಿ ಭಾನುವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಭಾನುವಾರ ಅಂಕಣ ಮೂಡಿ ಬರುತ್ತಿದೆ. ಶಶಿಧರ ಹೆಗಡೆ ಎಂಬ ಅಂಕಣಕಾರ ಈ ಪಂಚರತ್ನ ಯಾತ್ರೆಯ ಪರಿಕಲ್ಪನೆ ಕುರಿತು ಬರೆಯುತ್ತಿದ್ದಾರೆ. ಅದರಲ್ಲಿ ೧೨೩ ಸ್ಥಾನ ಜೆಡಿಎಸ್ ಗಳಿಸುವುದು ಅಷ್ಟು ಸುಲಭವಲ್ಲ. ಹಾಗೇನಾದರೂ ಲಭಿಸಿದರೆ ಈ ರಾಜ್ಯ ರಾಮರಾಜ್ಯವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನು ನಾನು ಇಲ್ಲಿ ಹೇಳಲು ಕಾರಣ, ಮಾದ್ಯಮದವರು ರಾಜ್ಯದ ಜನತೆಗೆ ಇಂತಹಾ ವಿಚಾರ ಮುಟ್ಟಿಸಲಿ ಎಂದಷ್ಟೆ.
ನಮ್ಮ ತಂದೆ ರಾಜ್ಯದ ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ರಾಜಕಾರಣ ನಡೆಸುವುದರಲ್ಲಿ ಬ್ಯುಸಿಯಾಗಿದ್ದರು. ಇದರಿಂದ ತಾಯಿಯ ನೆರಳಲ್ಲಿ ನಮ್ಮ ಬಾಲ್ಯ ಬೆಳವಣಿಗೆ ಕಂಡಿದೆ. ನಮ್ಮಲ್ಲಿ ಮಾತೃ ಹೃದಯವನ್ನು ಬಿತ್ತಿ ಬೆಳೆಸಿದ್ದು ನಮ್ಮ ತಾಯಿ. ಜನ್ಮಸ್ಥಳದಲ್ಲಿ ನಾನು ನಮ್ಮ ಬಾಲ್ಯಾವಸ್ಥೆಯನ್ನು ಸ್ಮರಿಸಲು ಬಯಸಿದೆಯಷ್ಟೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ. ರೇವಣ್ಣ, ಜಿ.ಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ವಿಧಾನ ಪರಿಷತ್ತಿನ ಸದಸ್ಯ ಸೂರಜ್‌ರೇವಣ್ಣ, ಶಾಸಕ ಬಾಲಕೃಷ್ಣ, ಮಾಜಿ ಸಚಿವ ಎ.ಮಂಜು ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು. ಸಂಜೆ ೬ ಕ್ಕೆ ನಿಗಧಿಯಾಗಿದ್ದ ಪಂಚರತ್ನ ಯಾತ್ರೆ ೩ ಗಂಟೆ ತಡವಾಗಿ ಆಗಮಿಸಿತು. ಪಟ್ಟಣದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದು ರಾತ್ರಿ ೧೦ರ ನಂತರ ಹೆಚ್.ಡಿ. ಕುಮಾರಸ್ವಾಮಿ ಭಾಷಣಕ್ಕೆ ಗ್ರಾಮೀಣ ಭಾಗದ ಅಭಿಮಾನಿಗಳು ಕಾದು ಕುಳಿತಿದ್ದರು.
ಪಟ್ಟಣದ ಎಲ್ಲೆಡೆ ಫ್ಲಕ್ಸ್, ಬಾವುಟಗಳ ಹಾರಾಟ ಜೋರಾಗಿತ್ತು. ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ರೋಡ್ ಶೋ ನಡೆಸಿದರು. ಹೇಮಾವತಿ ಕ್ರೀಡಾಂಗಣದಲ್ಲಿ ಹಾಕಿದ್ದ ಆಸನಗಳಲ್ಲಿ ಅರ್ಧದಷ್ಟು ಖಾಲಿ ಉಳಿದಿತ್ತು. ಬಂದವರಿಗೆ ಚಿಕನ್ ಸ್ಪೆಷಲ್ ಭರ್ಜರಿಯಾಗಿತ್ತು. ರೋಡ್ ಶೋ ಉದ್ದಕ್ಕೂ ಹೊಳೆನರಸೀಪುರದ ವಿಶೇಷತೆ ಸೌತೇಕಾಯಿ ಹಾರ, ಒಣದ್ರಾಕ್ಷಿ ಹಾರಗಳನ್ನು ಕ್ರೇನ್ ಮೂಲಕ ಪಂಚರತ್ನ ರೂವಾರಿ ಎಚ್.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳು ಸಮರ್ಪಿಸಿದರು.