ಹಾಸನ: ಜಿಲ್ಲೆಯಲ್ಲಿ ಮಾರ್ಚ್ ೧೦ರಿಂದ ಪಂಚರತ್ನ ಯಾತ್ರೆ ಆರಂಭವಾಗಲಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಿಳಿಸಿದರು. ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ್ ೧೦ರಂದು ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುವುದು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ, ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಎಸ್. ಲಿಂಗೇಶ್ ಸೇರಿದಂತೆ ಜೆಡಿಎಸ್ ನ ಶಾಸಕರು ಹಾಗೂ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಮಾರ್ಚ್ ೧೩ರಂದು ಚನ್ನರಾಯಪಟ್ಟಣ, ಮಾ. ೧೪ ರಂದು ಅರಸೀಕೆರೆ, ಮಾ.೧೫ರಂದು ಹೊಳೆ ನರಸೀಪುರ, ಮಾ. ೧೬ರಂದು ಅರಕಲಗೂಡು, ಮಾ. ೧೭ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕಡೂರು ಹಾಗೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯು ನಡೆಯಲಿದ್ದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಮಾರಂಭ ಆಯೋಜನೆ ಮಾಡುವ ಮೂಲಕ ಪಂಚರತ್ನ ಜಾತ್ರೆ ನಡೆಯಲಿದೆ ಎಂದರು. ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ .ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಅಧಿಕಾರ ಅವಧಿಯಲ್ಲಿ ನೀಡಿದಂತಹ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಂತರ ಬಂದಂತಹ ಕಾಂಗ್ರೆಸ್-ಬಿಜೆಪಿ ಸರ್ಕಾರಗಳಿಂದ ಜಿಲ್ಲೆಗೆ ಆಗಿರುವಂತಹ ಅನ್ಯಾಯಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಶೀಘ್ರದಲ್ಲೇ ಎರಡನೇ ಪಟ್ಟಿ :
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜ್ಯದ ೯೦ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಎರಡನೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ. ಹಾಸನದ ಏಳು ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದು ಅಂತಯೇ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲರೂ ತೀರ್ಮಾನ ಕೈಗೊಂಡು ಅಂತಿಮಗೊಳಿಸಲಿದ್ದೇವೆ ಎಂದರು.
ರಾಜ್ಯದಲ್ಲಿ ಎರಡು ರಾಜಕೀಯ ಪಕ್ಷಗಳು ಪಟ್ಟಿ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕುವ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇನ್ನು ಕೆಲವೇ ದಿನದಲ್ಲಿ ಎರಡನೇ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಿದ್ದೇವೆ ಎಂದರು.
ಕಪ್ಪುಚುಕ್ಕಿ ಇಲ್ಲ: ಹೆಮ್ಮೆ ಇದೆ
ಹಲವು ದಶಕಗಳಿಂದ ರಾಜ್ಯದಲ್ಲಿ ಮುತ್ಸದ್ದಿ ರಾಜಕೀಯ ವ್ಯಕ್ತಿಯಾಗಿ ಕೆಲಸ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಇದುವರೆಗೂ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಜೆಡಿಎಸ್ ಪಕ್ಷವನ್ನು ಮುನ್ನಡೆಸಿದ್ದಾರೆ. ದೇವೇಗೌಡರು ನನ್ನ ತಂದೆ ಎನ್ನುವುದಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರ ಮುಖಂಡರೇ ಹೇಳಿದ್ದಾರೆ:
ಹಣ ಇದೆ ಅದಕ್ಕಾಗಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು, ಯಾರ ಬಳಿ ಹಣವಿದೆ ಎಂದು ಕೇಳಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹಾಗೂ ಹಿಂದೆ ಆರೋಗ್ಯ ಮಂತ್ರಿ ಆಗಿದ್ದ ರಮೇಶ್ ಕುಮಾರ್ ಅವರೇ ಕಾಂಗ್ರೆಸ್ ಪಕ್ಷದ ನಾಯಕರ ಮಕ್ಕಳು ಮೊಮ್ಮಕ್ಕಳು ತಿನ್ನುವಷ್ಟು ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಶಿವಲಿಂಗೇಗೌಡರಿಗೆ ರಂಣರಂಗದಲ್ಲಿ ಉತ್ತರಿಸುವೆ:
ನಾವು ಯಾರನ್ನು ಸಮಾಧಾನ ಮಾಡಲು ಹೋಗುವುದಿಲ್ಲ. ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಏನು ಮಾಡಿದ್ದೇವೆ ಎಂದು ರಣರಂಗದಲ್ಲಿ ಉತ್ತರಿಸುವೆ…ರಣರಂಗ ಶುರುವಾಗಿಲ್ಲ ಎಂದು ತಿರುಗಟು ನೀಡಿದರು.
ಗೌಡರಿಗೆ ಕಣ್ಣೀರು ಹಾಕಿಸಿದ್ದಾರೆ :ಅನುಭವಿಸುವರು
ದೇವೇಗೌಡರಿಗೆ ಕಣ್ಣೀರು ಹಾಕಿಸಿದ್ದಾರೆ ಅವರಿಗೆ ಒಳ್ಳೆಯದು ಆಗೋಲ್ಲ, ಕಾಂಗ್ರೆಸ್ ಪಕ್ಷದವರು ನಮ್ಮನ್ನು ಬಿ ಟೀಂ ಎಂದು ಜರಿದರು ನಂತರ ಪದ್ಮನಾಭನಗರಕ್ಕೆ ಬಂದು ಪಾದಮುಟ್ಟಿ ಸಿಎಂ ಆಗುವಂತೆ ಒತ್ತಾಯಿಸಿದರು. ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು ಅವರ ಕಣ್ಣೀರು ಕಾಂಗ್ರೆಸ್ ಗೆ ಮುಳುವಾಗಲಿದೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರೆ ಕಾರಣ ಎಂದು ಶಿವಲಿಂಗೇಗೌಡ ಹೇಳಿದ್ದಾರೆ ಆದರೆ ಶಾಸಕರಾಗಿ ಮಾಡಿದ್ದು ಜೆಡಿಎಸ್ ಪಕ್ಷ, ೧೫ ವರ್ಷ ಅವರನ್ನು ಸಾಕಿದ್ದು, ಇದೀಗ ಇಂತಹ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹೊಳೆನರಸೀಪುರ ಜಾತ್ರೆ ವೇಳೆ ಪ್ರಸಾದ ವಿನಿಯೋಗ ಕುರಿತು ಎದ್ದಿರುವ ಗೊಂದಲ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು ೧೯೯೪ರಿಂದ ನಮ್ಮ ಕುಟುಂಬದಿಂದ ಪ್ರಸಾದ ವಿನಿಯೋಗ ನಡೆಯುತ್ತಿದೆ. ತೇರು ನಿರ್ಮಾಣಕ್ಕೆ ನಾನೇ ಕಾಣಿಕೆಯನ್ನು ನೀಡಿದ್ದೇನೆ. ಹಿಂದಿನ ಸಂಸ್ಕೃತಿ ಮುಂದುವರಿಸಲಾಗಿದೆ ಇದರಲ್ಲು ರಾಜಕೀಯ ಮಾಡುವುದು ಸರಿಯಲ್ಲ ಎಂದರು.