ಹಾಸನ: ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು ಸಹ ಕಾಂಗ್ರೆಸ್ ಸರ್ಕಾರ ಹಾಗೂ ಜನರ ನಡುವೆ ಪೋಸ್ಟ್ ಮ್ಯಾನ್ ರೀತಿ ಕೆಲಸ ಮಾಡುವುದಾಗಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರದಲ್ಲಿನ ಕೆಲ ಕಾಂಗ್ರೆಸ್ ಮುಖಂಡರ ಸುಳ್ಳು ಅಪಪ್ರಚಾರದಿಂದ ಚುನಾವಣೆಯಲ್ಲಿ ನನಗೆ ಸೋಲು ಉಂಟಾಯಿತು. ಆದರೂ ಧೃತಿಗೆಡದೆ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತ ಕ್ಷೇತ್ರದ ಜನರೊಂದಿಗೆ ಇರುವುದಾಗಿ ತಿಳಿಸಿದರು. ಪಕ್ಷದ ಹಿರಿಯರಾದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಸೇರಿದಂತೆ ಜಿಲ್ಲಾ ನಾಯಕರು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಸಹಕಾರ ನೀಡಿದರು. ಆದರೆ ಕ್ಷೇತ್ರದ ಕೆಲವರು ವ್ಯಯಕ್ತಿಕ ದ್ವೇಷಗಳನ್ನು ಮುಂದಿಟ್ಟುಕೊಂಡು ಪಕ್ಷದ ಸೋಲಿಗೆ ಪ್ರಮುಖ ಕಾರಣರಾದರು ಎಂದು ದೂರಿದರು.
ಚುನಾವಣೆ ಮುಗಿದ ಬಳಿಕ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮರೆಯಾಗುತ್ತಾರೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಕ್ಷೇತ್ರದಲ್ಲೇ ಉಳಿದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು, ಚುನಾವಣೆ ಸಂದರ್ಭದಲ್ಲಿ ಕರಪತ್ರದಲ್ಲಿ ನೀಡಿದಂತಹ ಬಡವರಿಗೆ ನಿವೇಶನ, ಆನೆ ಕಾರಿಡಾರ್, ಹೇಮಾವತಿ ನದಿಗೆ ತಡೆಗೋಡೆ, ಆಸ್ಪತ್ರೆ, ಯುವಕರಿಗೆ ಉದ್ಯೋಗ ಸೇರಿದಂತೆ ಕೈಲಾದ ಸಹಾಯವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಮುರಳಿ ಮೋಹನ್ ಭರವಸೆ ನೀಡಿದರು.
ಮುಂದಿನ ಐದು ವರ್ಷದ ಅವಧಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರಲಿದ್ದು, ಕ್ಷೇತ್ರ-ಸರ್ಕಾರದ ನಡುವೆ ಕೆಲಸ ಮಾಡುತ್ತಾ ಜನರಿಗೆ ಸಹಾಯ ಮಾಡುವುದಾಗಿ ಹೇಳಿದರು. ಬೈರಮುಡಿ ಚಂದ್ರು, ಗಿರೀಶ್, ಬೈಕೆರೆ ದೇವರಾಜ್, ಮಂಜಣ್ಣ, ಶಾಂತ ಮಲ್ಲೇಶ್ ಇದ್ದರು.