ಬೇಲೂರು: ತಾಲೂಕಿನ ಅರೇಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಿಕ್ಕೋಡಿನಲ್ಲಿ ನೂತನ ಶಾಸಕ ಹೆಚ್ ಕೆ ಸುರೇಶ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ವೇಳೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್ ಕೆ ಸುರೇಶ್ 5 ವರ್ಷಗಳ ಕಾಲ ಹಿಂದಿನ ಶಾಸಕರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ತಾಲೂಕಿನ ಜನತೆಗೆ ತಿಳಿದಿದೆ. ಮುಂದಿನ 5 ವರ್ಷಗಳಲ್ಲಿ ನಿಮ್ಮ ಮನೆಯ ಮಗನ ಗುಣಮಟ್ಟದ ಕೆಲಸವನ್ನು ನೀವುಗಳು ನೋಡುತ್ತೀರಿ. ತಾಲೂಕಿನ ಕ್ಷೇತ್ರವನ್ನು 224 ಕ್ಷೇತ್ರಗಳಿಗಿಂತ ವಿಭಿನ್ನವಾಗಿ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಗುರಿ.
ತಾಲೂಕಿನಲ್ಲಿ ಜನಸಾಮಾನ್ಯರ ಮೇಲೆ ಎಲ್ಲಾ ಇಲಾಖೆಗಳಿಂದ ಅಗುತ್ತಿರುವ ದೌರ್ಜನ್ಯ ತಡೆಗಟ್ಟುವುದರ ಜೊತೆಗೆ ಮೊದಲ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದು ನನ್ನ ಮೊದಲ ಆದ್ಯತೆ. ನಿಮ್ಮ ಯಾವುದೇ ಕೆಲಸ ಕಾರ್ಯ ಇದ್ದರೂ ನೇರವಾಗಿ ನನ್ನ ಬಳಿಗೆ ಬನ್ನಿ, 24 ಗಂಟೆಗಳ ಕಾಲ ನಾನು ನಿಮ್ಮ ಸೇವೆ ಮಾಡಲು ಸಿದ್ಧ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲಾ, ಆದರೂ ತಾಲೂಕಿನ ಅಭಿವೃದ್ಧಿಗೆ ಯಾವ ರೀತಿ ಅನುದಾನ ತರಬೇಕು ಎಂದು ನನಗೆ ತಿಳಿದಿದ್ದು, ಅದನ್ನು ತಂದು ಅಭಿವೃದ್ಧಿ ಪಡಿಸಲಾಗುವುದು. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದು, ಮುಂದೆಯೂ ಸಹ ನಮ್ಮದೇ ಸರ್ಕಾರ ಬರುವುದರಿಂದ ಅಭಿವೃದ್ಧಿಯೊಂದೇ ನಮ್ಮೆಲ್ಲರ ಮೂಲ ಮಂತ್ರವಾಗಿರಬೇಕು. ಗುತ್ತಿಗೆದಾರರು ಸರ್ಕಾರದ ಕೆಲಸ ದೇವರ ಕೆಲಸವೆಂದು ಮಾಡಬೇಕು. ಇಲ್ಲಿ ಯಾವುದೇ ಲೋಪವೆಸಗಿದ್ದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಿಲ್ಲಾ ವಕ್ತಾರ ಅಮಿತ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಕಲಾ ಇತರರು ಇದ್ದರು.