ಹಾಸನ: ವಿನಾಶ ಕಾಲೇ ವಿಪರೀತಿ ಬುದ್ದಿ ಎನ್ನುವಂತೆ ಜಿಲ್ಲೆಯಲ್ಲಿ ಇತ್ತೀಚೆಗೆ ಜೆಡಿಎಸ್ ನಾಯಕರ ವರ್ತನೆ ಬದಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ಇತ್ತೀಚಿನ ರಾಜಕೀಯ ನಡೆ ಹಾಗೂ ಅವರ ಅಬ್ಬರ ಜಿಲ್ಲೆಯಲ್ಲಿ ರೇವಣ್ಣ ಕುಟುಂಬ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವತ್ತ ಸಾಗುತ್ತಿದೆ ಎಂಬುದರ ಸ್ಪಷ್ಟ ಸೂಚನೆ ಎಂದು ಎ.ಟಿ.ಆರ್. ಎಚ್ಚರಿಸಿದರು.
ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಂತೇ ನಿಲ್ಲುತ್ತೇನೆ ಗೆದ್ದು ವಿಧಾನಸಭೆಗೆ ಹೋಗೆ ಹೋಗುತ್ತೇನೆ” ಎಲ್ಲಿ ನಿಲ್ಲಬೇಕು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದ ಅವರು ಯಾವುದೇ ರಾಜಕೀಯ ತೊಡಕು ಎದುರಾದರೂ ಚುನಾವಣೆಗಂತು ನಿಂತೇ ನಿಲ್ಲುತ್ತೇನೆ. ಯಾವುದೇ ಭಯ ಅನುಮಾನ ಬೇಡ, ಈ ಬಗ್ಗೆ ನಿರ್ಧಾರ ಪ್ರಕಟಿಸಲು ನಾನು ಒಬ್ಬನೇ ಹೇಳಲ್ಲ. ಇದು ಒಂದು ಕುಟುಂಬದಲ್ಲಿ ಆಗುವಂತಹ ತೀರ್ಮಾನವಲ್ಲ ಜನರೊಂದಿಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಪ್ರಕಟಿಸುತ್ತೇನೆ ಎಂದರು.
ಈ ಬಾರಿ ರಾಜಕೀಯ ರಣರಂಗವನ್ನು ಜನ ತೋರಿಸುತ್ತಾರೆ. ಜನಸಾಮಾನ್ಯರ ಹಿತವನ್ನು ಕಾಪಾಡಲು ಚುನಾವಣೆ ರಣರಂಗಕ್ಕೆ ಇಳಿಯುತ್ತಿದ್ದು ಅಲ್ಲಿ ನಿಮ್ಮ ಬೊಗಳೆ ಮಾತು ನಂಬುವುದಿಲ್ಲ ನಮ್ಮ ಜಿಲ್ಲೆಯ ಜನ ಇತಿಶ್ರೀ ಹಾಡುತ್ತಾರೆ ಎಂದು ರೇವಣ್ಣ ಕುಟುಂಬದ ವಿರುದ್ಧ ಗುಡುಗಿದರು. ಗುಂಪುಗಾರಿಕೆ ನಿಮ್ಮ ಕುಟುಂಬದಿಂದಲೇ ಆಗುತ್ತಿದೆ ನೀವೇ ಎತ್ತು ಕಟ್ಟುತ್ತಿದ್ದೀರಿ ಎಂದು ಆರೋಪಿಸಿದ ರಾಮಸ್ವಾಮಿಯವರು ಎಲ್ಲಾ ಪಕ್ಷದವರಿಂದ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಬಂದಿದ್ದರು ಜೆಡಿಎಸ್ ನಿಂದ ನನಗೆ ಅನ್ಯಾಯವಾಗಿದೆ ಎಂದರು.
ಪ್ರಾದೇಶಿಕ ಪಕ್ಷ ಗಟ್ಟಿಯಾಗಬೇಕು, ಕರ್ನಾಟಕ ರಾಜ್ಯ ಒಳ್ಳೆಯ ಸುಸಂಸ್ಕೃತವಾಗಿದೆ ಆದರೆ ಈಗ ಭ್ರಷ್ಟ ಕೆಟ್ಟ ರಾಜ್ಯ ಎಂಬ ಹಣೆಪಟ್ಟಿ ಸಿಕ್ಕಿದ್ದು ರಾಜ್ಯದ ಹಿತ ದೃಷ್ಟಿಯಿಂದ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗುವ ಅವಶ್ಯಕತೆ ಇದೆ ಎನ್ನುವುದು ನನ್ನ ಅಭಿಪ್ರಾಯ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಪಕ್ಷಕ್ಕಾಗಲಿ, ನಾಯಕರಿಗಾಗಲಿ ಕೆಟ್ಟ ಹೆಸರು ಬರುವಂತೆ ನಡೆದುಕೊಂಡಿಲ್ಲ. ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷ ಇರಲಿ, ತಪ್ಪನ್ನು ತಪ್ಪು ಎಂದು ಹೇಳಿಕೊಂಡು ಬಂದಿದ್ದೇನೆ. ಅಲ್ಲದೆ ಕೆಲವೊಮ್ಮೆ ಸತ್ಯ ಹೇಳಿದ್ದಕ್ಕೆ ದಂಡ ತೆರಬೇಕಾದ ಪರಿಸ್ಥಿತಿಯು ಎದುರಾಗಿದೆ. ಸ್ವಾರ್ಥಕ್ಕಾಗಿ ಕೆಲವು ಸತ್ಯವನ್ನು ಸಾಯಿಸುತ್ತಾರೆ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ ಅಂಥವರನ್ನು ನಂಬಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಕೆಲ ಜೆಡಿಎಸ್ ನಾಯಕರ ಮೇಲಿನ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ರೇವಣ್ಣ ಆಜ್ಞೆ ಇಲ್ಲದೆ ಆತ ಓಡಾಡಲು ಸಾಧ್ಯವೆ: ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಂದೂವರೆ ವರ್ಷದಿಂದ ಒಬ್ಬರು ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ, ಸಭೆ ಮಾಡುತ್ತಿದ್ದಾರೆ ರೇವಣ್ಣ ಅವರ ಆಜ್ಞೆ ಇಲ್ಲದೆ ಅನುಮತಿ ಇಲ್ಲದೆ ಇದೆಲ್ಲ ಮಾಡಲು ಹೇಗೆ ಸಾಧ್ಯ…!! ಹಾಗೂ ರೇವಣ್ಣ ಅವರೇ ಖಾಸಗಿಯಾಗಿ ಹೇಳುತ್ತಿದ್ದಾರೆ ಎಂದು ದೂರಿದರು.
ಶಾಸಕಾಂಗ ಪಕ್ಷದ ಸಭೆ ಬಂದಿಲ್ಲ ಅಂತ ಕುಮಾರಸ್ವಾಮಿ ಹೇಳಿದರು ಆದರೆ ಹಾಜರಾತಿ ಪುಸ್ತಕವನ್ನು ತೆಗೆದು ನೋಡಲಿ, ಕುಮಾರಸ್ವಾಮಿ ಅವರ ಬಗ್ಗೆ ಅಪಾರವಾದ ಗೌರವವಿದೆ ಆದರೆ ಸತ್ಯವನ್ನು ಮರೆಮಾಚಬಾರದು ಎಂದರು.
ಲೋಕಸಭಾ ಸದಸ್ಯರ ಚುನಾವಣೆ ವೇಳೆ ಹಾಸನದ ಚನ್ನಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆ ಕರೆದಿದ್ದರು ಎಲ್ಲರೂ ಹಾಲಿ ಸಂಸದರ ಹೆಸರು ಹೇಳಲು ಮೊದಲೇ ರೆಡಿಯಾಗಿ ಬಂದಿದ್ದರು ಒಬ್ಬರ ಅಭಿಪ್ರಾಯವನ್ನು ಕೂಡ ಕೇಳಲಿಲ್ಲ ಎಂದು ದೇವೇಗೌಡರ ಪರ ಮಾತನಾಡಿದ ಅವರು, ಎಂಪಿ ಅಭ್ಯರ್ಥಿಯ ನಾನು ಹೆಸರು ಹೇಳಲಿಲ್ಲ. ಅಲ್ಲೇ ಶುರುವಾಯಿತು ಎಂದು ನೆನಪಿಸಿದ ಅವರು ನನಗೂ ಆತ್ಮಸಾಕ್ಷಿ ಇಲ್ಲವಾ ಸ್ವತಂತ್ರವಾಗಿ ಅಭಿಪ್ರಾಯ ತಿಳಿಸುವ ಹಕ್ಕು ಇಲ್ಲವೇ ಎಂದು ನೊಂದು ನುಡಿದ ಅವರು ದೇವೇಗೌಡರನ್ನೇ ಮನೆಯಿಂದ ಜಿಲ್ಲೆಯಿಂದ ಹೊರಗಟ್ಟಿದರು ಆ ಮುತ್ಸದ್ದಿ ರಾಜಕಾರಣಿ. ಈ ವಯಸ್ಸಿನಲ್ಲಿ ಸೋಲನ್ನು ಕಾಣಬೇಕಾಯಿತು ಅದು ಇಂದಿಗೂ ನಮಗೆ ತುಂಬಾ ನೋವಿನ ವಿಷಯ ಅವರನ್ನೇ ಹೊರಗಟ್ಟಿದವರು ಇನ್ನು ನಾನು ಯಾವ ಲೆಕ್ಕ ಎಂದರು.
ಯಾರ ತಪಸ್ಸಿನಿಂದ ಇವರು ಮೇಲೆ ಬಂದರೂ ಆ ಹತ್ತಿದ ಏಣಿಯನ್ನು ಒದ್ದು ಬಿಸಾಕಿದರು, ನೋವು ಕೊಟ್ಟರೂ ಇವತ್ತು ಆ ಹಿರಿಯ ಜೀವ ನೋವಿನಿಂದ ನರಲಾಡುತ್ತಿದ್ದಾರೆ ಎಂದು ನುಡಿದರು. ಇದೇ ಸಂಸದರು ಕಳೆದ ವಿಧಾನಸಭಾ ಚುನಾವಣೆ ವೇಳೆ ಹುಣಸೂರು ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ನಲ್ಲಿ ಸೂಟ್ಕೇಸ್ ಕೊಟ್ಟವರಿಗೆ ಟಿಕೆಟ್ ಅಂತ ಹೇಳಿದರು. ಯಾರು ಟಿಕೆಟ್ ಕೊಡುತ್ತಿದ್ದರು, ಯಾವ ಹೈಕಮಾಂಡ್ ಕೊಡುತ್ತಿದ್ದರು ಹಾಗೆ ಹೇಳಲು ಲಂಘುಲಗಾಮು ಇಲ್ವಾ? ದೇವೇಗೌಡರು ಈ ಮಾತನ್ನು ಹೇಗೆ ಅರಗಿಸಿಕೊಂಡರು? ಇದೇ ಮಾತನ್ನು ಬೇರೆ ಯಾರಾದರೂ ಆಡಿದ್ದರೆ ಸುಮ್ಮನೆ ಇರುತ್ತಿದ್ದರೆ ಎಂದು ಪ್ರಶ್ನಿಸಿದರು.
ಕೆಎಮ್‌ಎಫ್-ಡಿಸಿಸಿ ಬ್ಯಾಂಕ್ : ಜೆಡಿಎಸ್ ಕಪಿಮುಷ್ಠಿಯಲ್ಲಿ ಹಾಸನ ಹಾಲು ಒಕ್ಕೂಟ ಡಿಸಿಸಿ ಬ್ಯಾಂಕ್ ಅವರ ಕಪಿಮುಷ್ಠಿಯಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಡಿಸಿಸಿ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯದೆ ಹಳ್ಳಿ ಮೈಸೂರು ಭಾಗದ ಕೆಲ ರೈತರ ಪಹಣಿಯಲ್ಲಿ ಸಾಲ ಪಡೆಯಲಾಗಿದೆ ಎಂದು ನಮೂದಿಸಲಾಗಿದೆ. ಹಾಗಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಾರಿ ಗೋಲ್ಮಾಲ್ ಆಗಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತಿ ಸಭೆಯಲ್ಲಿಯೇ ವಿಷಯ ಪ್ರಸ್ತಾಪ ಮಾಡಲು ಮುಂದಾದಾಗ ರೇವಣ್ಣ ನನ್ನನ್ನು ತಡೆಯಲು ಬಂದರು. ಆದರೆ ನಾನು ಅದನ್ನು ಬಿಡಲಿಲ್ಲ ಉಸ್ತುವಾರಿ ಸಚಿವರಾಗಿದ್ದ ಮಾಧುಸ್ವಾಮಿ ಮುಂದೆ ಪ್ರಸ್ತಾಪ ಮಾಡಿದೆ, ನಂತರ ಅದರ ತನಿಖೆ ಮಾಡಿಸಿ ಅನ್ಯಾಯಕ್ಕೆ ಒಳಗಾಗಿದ್ದ ರೈತರಿಗೆ ನ್ಯಾಯ ಒದಗಿಸಲಾಯಿತು ಎಂದು ನೆನಪಿಸಿದರು.
ಬಗರ್ ಹುಕ್ಕುಂ ಅಡಿಯಲ್ಲಿ ಇವರು ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಸಮಿತಿಯಲ್ಲಿ ಒಪ್ಪಿಗೆ ನೀಡಿದ್ದರೂ ಕೂಡ ಅವರು ಹಕ್ಕುಪತ್ರ ನೀಡಲು ಬಿಡುತ್ತಿರಲಿಲ್ಲ ಇವರು ರೈತರ ಮಕ್ಕಳ? ಎಂದು ಪ್ರಶ್ನಿಸಿದರು. ತಾವು ಕರೆದಿದ್ದ ಸಭೆಯನ್ನು ಮುಂದೂಡಲಾಗಿದೆ ಎನ್ನುವ ಸುಳ್ಳು ಪತ್ರವನ್ನು ಸೃಷ್ಟಿ ಮಾಡಿದ್ದು ಯಾರು ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಇದೇ ಕೆಲಸವನ್ನು ಬೇರೆ ಯಾರಾದರೂ ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಕುಮಾರ ಸ್ವಾಮಿಯವರು ಸಾತ್ವಿಕ ಗುಣದ ನನ್ನನ್ನು ಕೆಣಕಿದ್ದಾರೆ. ರೇವಣ್ಣ ಕುಟುಂಬದ ವಿಪರೀತ ಬುದ್ಧಿ ವಿನಾಶಕಾಲೇ ಎನ್ನುವಂತೆ, ರೇವಣ್ಣ ಕುಟುಂಬ ತನ್ನ ಅತಿಬುದ್ಧಿಯಿಂದಾಗಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದೆ ಎಂದು ಗುಡುಗಿದರು.
ರೇವಣ್ಣ ಹಾಗೂ ಕುಟುಂಬ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಇದೀಗ ಅವರು ಮಾಡುತ್ತಿರುವ ರಾಜಕೀಯ ಗಮನಿಸಿದವರು ಇದು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವ ಸೂಚನೆ ಎಂದರು. ಹಾಸನ ಜಿಲ್ಲೆಯ ಜೆಡಿಎಸ್‌ನಲ್ಲಿ ಗುಲಾಮಗಿರಿ ಇದೆ ಕೈಕಟ್ಟಿ ನಿಲ್ಲಬೇಕು, ಉಸಿರು ಬಿಡುವುದು ಕಷ್ಟವಾಗಿದೆ. ಅವರ ಮನೆ ಮುಂದೆ ಕೈ ಕಟ್ಟಿ ನಿಲ್ಲಬೇಕು ಅಂತಹ ಪರಿಸ್ಥಿತಿಯನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಜನ ಈ ಬಾರಿ ಅದರಿಂದ ಹೊರ ಬರಲೇಬೇಕು ಸ್ವಾಭಿಮಾನಿಗಳಾಗಬೇಕು ಎಂದು ಕರೆ ನೀಡಿದರು. ಜಿಲ್ಲೆಯಲ್ಲಿ ರಾಜಕೀಯ ಕಳೆ ಬೆಳೆದಿದೆ ಅದನ್ನು ಬುಡ ಸಮೇತ ಕಿತ್ತು ಹಾಕಬೇಕು ಉಸಿರುಗಟ್ಟಿಸುವ ವಾತಾವರಣ ಹಾಸನದಲ್ಲಿ ಇದ್ದು ಇದರಿಂದ ಜನರು ಹೊರ ಬರಬೇಕಾಗಿದೆ. ಈ ನಿಟ್ಟಿನಲ್ಲಿ ರಣರಂಗದಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.
ಕ್ಷೇತ್ರ ಮರುವಿಂಗಡಣೆ: ದೇವೇಗೌಡರ ಹೆಸರು ದುರ್ಬಳಕೆ
ಕ್ಷೇತ್ರ ಮರು ವಿಂಗಡಣೆ ವೇಳೆ ಜನಸಂಖ್ಯೆ ಸಾಲದೆ ಬಂದಾಗ ತಮ್ಮದೇ ತಾಲೂಕಿನ ಹಳ್ಳಿ ಮೈಸೂರನ್ನು ಕೈ ಬಿಟ್ಟು 60 ಕಿಲೋಮೀಟರ್ ದೂರದ ಶಾಂತಿಗ್ರಾಮ ನಿಟ್ಟೂರನ್ನು ಸೇರಿಸಿಕೊಂಡಿದ್ದಾರಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಈ ಮೂಲಕ ಕ್ಷೇತ್ರ ಮರು ವಿಂಗಡಣೆ ಸಮಿತಿಯಲ್ಲಿದ್ದ ದೇವೇಗೌಡರನ್ನು ದುರುಪಯೋಗ ಮಾಡಿಕೊಂಡಿರುವ ನೀವು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀರಲ್ಲ ನಿಮಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಕಳೆದ ತಿಂಗಳು 600 ಕೋಟಿ ನೀರಾವರಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನ ಮಾಡಲು ಅವರ ಮನೆಗೆ ಹೋಗಿದ್ದೆ ನನ್ನ ಕೈ ಹಿಡಿದುಕೊಂಡು ರಾಮಸ್ವಾಮಿಯವರೇ ನಿಮಗೆಲ್ಲ ಏನೇನು ಕಿರುಕುಳ ಕೊಡುತ್ತಿದ್ದಾರೆ ಗೊತ್ತು, ನನಗೆ ನನ್ನ ಜೀವ ಇರುವವರೆಗೆ ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಅಂದಿದ್ದರು ಅವರು ಬರಲು ಸಹ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮದ ಹಿಂದಿನ ದಿನ ರೇವಣ್ಣ ಮನೆಯಲ್ಲಿ ಜನ ಸೇರಿಸಿದರು. ಅವರಿಗೆ ರಾಮಸ್ವಾಮಿಗೆ ಟಿಕೆಟ್ ಕೊಡಬೇಡಿ ಎಂದು ಹೇಳಿಸಿದರು. ನಾನು ಲೂಟಿಕೋರನ, ಅನ್ಯಾಯ ಮಾಡಿದ್ದೀನ, ಮೋಸ ಮಾಡಿದ್ದೀನ? ಒಳ್ಳೆಯವರು ಪ್ರಾಮಾಣಿಕರನ್ನು ಕೆಲವರು ಸ್ವಾರ್ಥಕ್ಕಾಗಿ ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿ ಕಾರಿದ ಅವರು ನಂತರ ಎಲ್ಲರಿಗೂ ದೂರವಾಣಿ ಕರೆ ಮಾಡಿ ಕಾರ್ಯಕ್ರಮ ರದ್ದಾಗಿದೆ ಎಂದರು.
ಇಂತಹ ಕೀಳು ಮಟ್ಟದ ಕೆಟ್ಟ ರಾಜಕಾರಣ ಎಲ್ಲಿಯವರೆಗೆ ಸಹಿಸಿಕೊಂಡು ಹೋಗುವುದು ಅವರ ಪಾಪದ ಕೆಲಸಗಳಿಗೆ ಬೆಂಬಲ ಕೊಡದಿದ್ದರೆ ವಿರೋಧಿಗಳಾಗುತ್ತೇವೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಅಸಮಾಧಾನ ತೋಡಿಕೊಂಡರು. ಇಂತಹ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ ಅವರ ಹೇಳಿಕೆಯನ್ನು ಪ್ರೀತಿಯಿಂದ ಸವಾಲಾಗಿ ಸ್ವೀಕರಿಸಿದ್ದೇನೆ. ಒಂದು ನರಪಿಳ್ಳೆ ಸಹ ಅವರ ಮನೆಯೊಳಗೆ ಹೋಗಿ ಅಲ್ಲಿ ನಿಂತು ಮೈಕ್ ಹಿಡಿದು ಮಾತನಾಡಲು ಆಗುತ್ತದೆಯೇ? ಈ ರೀತಿ ಜನ ಸೇರಿಸಿ ನನ್ನ ವಿರುದ್ಧ ಎತ್ತಿ ಕಟ್ಟಿದ್ದಾರೆ ಎಷ್ಟು ದಿನ ಈ ಬೂಟಾಟಿಕೆ ಒಳಗೊಂದು ಹೊರಗೊಂದು ನಾಟಕ ನಡೆಯುತ್ತದೆ ಎಂದು ಕಿಡಿ ಕಾರಿದರು.
ಕಲುಷಿತ ರಾಜಕಾರಣ: ನ್ಯಾಯಾಂಗ ವ್ಯವಸ್ಥೆ ಮೇಲು ಕರಿನೆರಳು
ರಾಜಕಾರಣ ಕಲುಷಿತವಾಗಿದ್ದು ಶಾಸಕಾಂಗ ಮತ್ತು ಕಾರ್ಯಾಂಗದ ಗುಣಮಟ್ಟ ಕ್ಷೀಣಿಸುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಪಾವಿತ್ರತೆ ಕಾಪಾಡಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರಾಮಸ್ವಾಮಿ ಅವರು “ಕಾಪಾಡುವ ದೇವರೇ ಕೊಲೆಗಾರರಾಗಿ ಬಿಟ್ಟರೆ” ನಿಮ್ಮನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದ ಅವರು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಆದರೆ ಭಾರತದ ಆಧಾರ ಸ್ತಂಭಗಳು ಅಲುಗಾಡುತ್ತಿವೆ ದೇಶದಲ್ಲಿ ಓಲೈಕೆ ರಾಜಕಾರಣ ಪ್ರಾರಂಭವಾಗಿದೆ ಅದನ್ನು ನಿಯಂತ್ರಿಸುವ ಚುನಾವಣೆ ಆಯೋಗವು ಕೂಡ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಎ.ಮಂಜು ಜೊತೆ ರೇವಣ್ಣ ರಾಜಿ
ಹೈಕೋರ್ಟ್ ನಲ್ಲಿ ಇರುವ ಕೇಸ್ ತೀವ್ರತರವಾಗಿತ್ತು ಅದನ್ನು ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಬೇರೆಯವರನ್ನು ಬಲಿ ಕೊಟ್ಟಿದ್ದಾರೆ ನನಗೆ ರಾಜಕೀಯವಾಗಿ ಜೀವದಾನ ಮಾಡಿದ್ದಾರೆ ಇದಕ್ಕೆ ಅಪಕೃತನಾಗಿದ್ದೇನೆ ಎಂದರು.
ಚುನಾವಣಾ ಆಯೋಗಗಳ ನೀತಿಯು ಚುನಾವಣೆಗೆ ಅಷ್ಟೇ ಸೀಮಿತವಾಗಿದೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾನಿಯಾಗುತ್ತಿದ್ದರು, ಚುನಾವಣೆ ಆಯೋಗ ಗಮನ ಹರಿಸದಿರುವುದು ದುರಂತವಾಗಿದೆ ಎಂದರು. ಇಂದಿನ ರಾಜಕಾರಣ ಬಗ್ಗೆ ನೋವಿನ ವಿಚಾರಗಳನ್ನು ಪ್ರಸ್ತಾಪಿಸಿದ ಅವರು ಹಲವು ಮಂದಿ ವ್ಯವಸ್ಥೆಯ ವಿರುದ್ಧ ಈಜಲಾರದೆ ತೊಳಲಾಡುತ್ತಿದ್ದಾರೆ. ಪ್ರಾಮಾಣಿಕರಿಗೆ, ಒಳ್ಳೆಯವರಿಗೆ, ಯೋಗ್ಯರಿಗೆ ಈ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ
ಅನಿಸುತ್ತದೆ ಎಂದು ಅಸಮಾಧಾನ ತೊಡಿಕೊಂಡರು.