ಹಾಸನ: ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಸಂಸದ ಮನೋಜ್ ತಿವಾರಿ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಸಂಸದನಾದ ನನಗೆ ಹಾಸನ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ನಿಯೋಜಿಸಲಾಗಿದ್ದು, ಇಲ್ಲಿನ ಶಾಸಕರಾದ ಪ್ರೀತಂ ಜೆ ಗೌಡ ಅವರು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನು ಹರಿಸಿದ್ದಾರೆ. ರಸ್ತೆ, ಕುಡಿಯುವ ನೀರು ಸೇರಿದಂತೆ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಪ್ರಧಾನಿಯಾಗಿ, ಮುಖ್ಯಮಂತ್ರಿಗಳಾಗಿ ಹಲವು ಅಧಿಕಾರಗಳನ್ನು ಅನುಭವಿಸಿದರೂ ಕೂಡ ಹಾಸನ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಜೆ ಗೌಡ ಅವರು ಅಧಿಕಾರಕ್ಕೆ ಬಂದ ನಂತರ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮಣ್ಣನೆ ಗಳಿಸಿದ್ದಾರೆ. ಪ್ರಮುಖವಾಗಿ ಹಲವು ವರ್ಷದ ಬೇಡಿಕೆಯಾದ ನೂರಾರು ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿದ್ದು, ಎಲ್ಲಾ ಜನಾಂಗದವರಿಗೂ ಸಮನಾಗಿ ಕಾಣುವ ಪಕ್ಷ ಇದ್ದರೆ ಅದು ಬಿಜೆಪಿ, ಆ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲೂ ಅದೇ ರೀತಿ ಕೆಲಸ ನಡೆದಿದೆ ಎಂದರು.
ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಜ್ವಲ್ ರೇವಣ್ಣ ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡಿಲ್ಲ. ಸದನದಲ್ಲಿ ಅವರ ಹಾಜರಾತಿ ತೀರ ಕಳಪೆಯಾಗಿದ್ದು, ಇದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯುತ್ತಿದ್ದು ರಾಜ್ಯ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಈ ಬಾರಿಯೂ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ಎಲ್ಲಾ ಸಮುದಾಯದ ಜನರನ್ನು ಒಟ್ಟಾಗಿ ಕೊಂಡೊಯ್ಯುತ್ತಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮೂಲಕ ಇದು ಸಾಬೀತಾಗಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜನ್ಮಸ್ಥಳವನ್ನು ಗುರುತಿಸಿ, ಅದೊಂದು ಪ್ರವಾಸಿ ತಾಣವಾಗಿ ಹಾಗೂ ಅಧ್ಯಯನ ಕೇಂದ್ರವಾಗಿ ಮಾಡಿದ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ.
ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ನಿರಾಧಾರವಾಗಿದ್ದು, ಪ್ರಧಾನಿಯವರಿಗೆ ದೂರು ನೀಡಿದಂತಹ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಅವರು ಇದುವರೆಗೂ ಆರೋಪಕ್ಕೆ ಪೂರಕವಾದ ಯಾವುದೇ ದಾಖಲಾತಿಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇದು ಕೇವಲ ಬಿಜೆಪಿ ಹಣಿಯುವ ಕುತಂತ್ರವಾಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದು ಎಲ್ಲಾ ಸಮುದಾಯಗಳ ಮತಗಳು ಮುಖ್ಯವಾಗಿದೆ. ಬಿಜೆಪಿಯ ಯಾವುದೇ ನಾಯಕರು ಮುಸ್ಲಿಂ ಮತಗಳು ಬಿಜೆಪಿಗೆ ಅವಶ್ಯಕತೆ ಇಲ್ಲ ಎಂದರೆ ಅದು ಅವರ ವೈಯಕ್ತಿಕವಾದ ಪ್ರತಿಕ್ರಿಯೆಯಾಗಿದೆ ಎಂದು ಸಿ.ಟಿ ರವಿ ಅವರ ಹೇಳಿಕೆ ಕುರಿತು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೀಲಕಾಂತ್ ಭಕ್ಷಿ, ಮನು, ಚಂದ್ರು, ವೇಣುಗೋಪಾಲ ಇದ್ದರು.