ಹಾಸನ: ಕೆರೆ ಹಾಗೂ ಪಾರ್ಕ್ ಅಭಿವೃದ್ಧಿ ಹೆಸರಲ್ಲಿ ಶಾಸಕ ಪ್ರೀತಂ ಜೆ ಗೌಡ ಸುಮಾರು 100 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ ಮಹೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವರಾದ ರೇವಣ್ಣ ಅವರು ಚನ್ನಪಟ್ಟಣ ಕೆರೆ ಅಂಗಳದಲ್ಲಿ ಪಾರ್ಕ್ ಹಾಗೂ ಇತರೆ ಅಭಿವೃದ್ಧಿಗಾಗಿ 144 ಕೋಟಿ ಹಣ ಬಿಡುಗಡೆ ಮಾಡಿಸಿದ್ದರು, ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕ ಪ್ರೀತಮ್ ಜೆ ಗೌಡ ಅವರು 144 ಕೋಟಿ ಹಣವನ್ನು ನಗರದ ವಿವಿಧ ಕೆರೆ ಹಾಗೂ ಪಾರ್ಕ್ ಅಭಿವೃದ್ಧಿಗೆ ವರ್ಗಾಯಿಸಿದರು.
ಇದರಲ್ಲಿ ನಗರದ ಮಹರಾಜ ಪಾರ್ಕ್ ಗೆ 14.36 ಕೋಟಿ ಹಣವನ್ನು ವ್ಯಯ ಮಾಡಿದ್ದಾರೆ ಎಂದು ದಾಖಲೆ ಕೊಡುತ್ತಾರೆ, ಆದರೆ ವಾಸ್ತವವಾಗಿ ಪಾರ್ಕ್ ಗೆ ಭೇಟಿ ನೀಡಿ ನೋಡಿದರೆ ನಿಜ ಬಣ್ಣ ಬಯಲಾಗಲಿದೆ ಎಂದರು. ಇನ್ನೂ ಉಳಿದ ಪಾರ್ಕ್‌ಗಳಿಗೆ ಕ್ರಮವಾಗಿ ತಲಾ 4ರಿಂದ 9ಕೋಟಿ ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸಿದ್ದಾರೆ. ಆದರೆ ಇಷ್ಟು ಕಾಮಗಾರಿಗಳಿಗೆ ಸರಕಾರ ಆದೇಶದಂತೆ ಎಷ್ಟು ಹಣ ಖರ್ಚಾಗಿದೆ, ಏನೇನೂ ಅಭಿವೃದ್ಧಿ ಮಾಡಲಾಗಿದೆ ಎಂಬ ಮಾಹಿತಿಯ ಫಲಕವನ್ನು ಎಲ್ಲಿಯು ಅಳವಡಿಸಿಲ್ಲ ಎಂದು ಆರೋಪ ಮಾಡಿದರು.
ಈಗಾಗಲೇ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮೀಷವಾಗಿ ಕೆಲ ನಕಲಿ ವಸ್ತುಗಳನ್ನ ನೀಡಿ ಶಾಸಕರು ತನ್ನತ್ತ ಸೆಳೆಯಲು ನೋಡಿದರು. ಆದರೆ ಜನರು ಬುದ್ದಿವಂತರಿದ್ದಾರೆ. ನೀವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು, ನಕಲಿ ಆಮಿಷಗಳನ್ನು ಜನರು ಕಣ್ಣಾರೆ ನೋಡುತ್ತಿದ್ದಾರೆ. ರಾಜ್ಯದ ನಂ.1 ಭ್ರಷ್ಟಾಚಾರ ಆರೋಪದಲ್ಲಿರುವ ನೀವು, ಒಂದಲ್ಲ ಒಂದು ದಿನ ಜೈಲಿಗೆ ಹೋಗುವ ಸಂದರ್ಭ ಬರುತ್ತದೆ. ಶಾಸಕ ಪ್ರೀತಮ್ ಗೌಡ ಈ ಬಾರಿ ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.
ನಗರದಲ್ಲಿ ನಡೆದಿರುವ ರಸ್ತೆ ಕಾಮಗಾರಿಯೂ ಸಹ ಕಳಪೆಯಿಂದ ಕೂಡಿದ್ದು, ಈ ಬಗ್ಗೆಯೂ ಅಗತ್ಯ ಮಾಹಿತಿ ಫಲಕದ ಮೂಲಕ ಪ್ರದರ್ಶನ ಮಾಡಲಿ. ಈಗಾಗಲೇ ನಗರದಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳ ಸಂಬಂಧ ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಹಾಗೂ ದೂರವಾಣಿ ಮೂಲಕ ಎಚ್ಚರಿಕೆ ನೀಡಲಾಗಿದ್ದು, ಕಾಮಗಾರಿ ಸಂಬಂಧ ಮುಂದೆ ಯಾವುದೇ ತನಿಖೆಗೆ ಸಿದ್ದರಿರುವಂತೆ ತಿಳಿಸಿದ್ದೇನೆ. ನಡೆದಿರುವ ಅಕ್ರಮದ ಕುರಿತು ಲೋಕಾಯುಕ್ತಕ್ಕೂ ದೂರ ನೀಡಲಿದ್ದೇನೆ ಎಂದು ಮಹೇಶ್ ತಿಳಿಸಿದರು.
ಐದು ವರ್ಷದಲ್ಲಿ ಶಾಸಕರ ಅನುದಾನವನ್ನು ಯಾವ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂಬುವುದನ್ನು ದಯವಿಟ್ಟು ಜನತೆಯ ಮುಂದೆ ತಿಳಿಸಲಿ ಎಂದು ನಾನು ಶಾಸಕರಿಗೆ ಮನವಿ ಮಾಡುತ್ತೇನೆ. ಅಭಿವೃದ್ಧಿ ಮಾಡಿದ್ದೇವೆ ಎಂಬುವುದನ್ನು ನೀವು ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಹೇಳಿದರು.
ಹಾಸನ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಜೆಡಿಎಸ್ ಸೇರಿದಂತೆ ಇತರೆ ಪಕ್ಷದವರೂ ಸಹ ನನ್ನ ಜೊತೆ ವಿಶ್ವಾಸದಿಂದಿದ್ದಾರೆ. ಚುನಾವಣೆಯೇ ಬೇರೆ ವಿಶ್ವಾಸವೆ ಬೇರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ವಿನೋದ, ಹೇಮಂತಕುಮಾರ, ಪ್ರಕಾಶ ಹಾಜರಿದ್ದರು.