ಹಾಸನ: ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಕೂಡ ನಾಚುವಷ್ಟರ ಮಟ್ಟಿಗೆ ಚುನಾವಣಾ ಪ್ರಚಾರ ನಡೆಸುತ್ತಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಎಂ.ಟಿ ಕೃಷ್ಣೇ ಗೌಡರ ಪ್ರಚಾರದ ಅಬ್ಬರ ಹಾಗೂ ಅವರು ಹೋದಲ್ಲೆಲ್ಲಾ ಸಿಗುತ್ತಿರುವ ಜನಬೆಂಬಲವನ್ನು ಕಂಡ ಕ್ಷೇತ್ರದ ಸ್ಥಳೀಯ ನಾಯಕರು ದಿನಕ್ಕೊಬ್ಬರಂತೆ ಕೃಷ್ಣೇಗೌಡರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದರೊಂದಿಗೆ ಕೃಷ್ಣೇಗೌಡರ ಹಿಂದಿರುವ ಸೈನ್ಯ ದಿನ ಕಳೆದಂತೆ ಹೆಚ್ಚಾಗುತ್ತಿದೆ.
ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡರ ನಡುವೆಯೇ ನೇರ ಹಣಾಹಣಿ ಇರುವುದು. ಆದರೆ ಗೆದ್ದೇ ಗೆಲ್ಲುತ್ತೇನೆ ಎನ್ನುವ ಅತೀವ ವಿಶ್ವಾಸದಲ್ಲಿದ್ದಂತೆ ಕಾಣುವ ಎ.ಮಂಜು ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ನಡೆಸುತ್ತಿಲ್ಲ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಇದರ ಪರಿಣಾಮವಾಗಿ ಇಷ್ಟು ವರ್ಷಗಳ ಕಾಲ ಎ.ಮಂಜು ಅವರೊಂದಿಗೆ ಇದ್ದು, ಅವರ ಏಳಿಗೆಗಾಗಿ ಶ್ರಮಿಸಿದ ಹಲವಾರು ಇಂದು ಕೃಷ್ಣೇಗೌಡರ ಹಿಂದಿದ್ದಾರೆ.
ಈ ನಡುವೆ ಕ್ಷೇತ್ರದ ವಿವಿಧ ತಳ ಸಮುದಾಯಗಳ ಮುಖಂಡರು ಕೂಡ ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿ ತಮ್ಮ ಸಮುದಾಯದ ಮತಗಳನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿ ಬೆಂಬಲಿಸುವಂತೆ ಕರೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃಷ್ಣೇಗೌಡರು ಕೂಡ ಹಳ್ಳಿಹಳ್ಳಿಗಳನ್ನು ಸುತ್ತುತ್ತಿದ್ದು, ಎಲ್ಲಾ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದಲ್ಲಿರುವ ವಿವಿಧ ಮಠ ಮಾನ್ಯಗಳಿಗೂ ಭೇಟಿ ನೀಡಿ ಗುರುಗಳ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆರಂಭದ ದಿನಗಳಲ್ಲಿ ಯಾವ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದರೋ ಅದೇ ವೇಗದಲ್ಲಿ ಇಂದಿಗೂ ಕೂಡ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡರು ಪ್ರಚಾರ ನಡೆಸುತ್ತಿದ್ದಾರೆ.
ಶನಿವಾರ ಕೂಡ ಕೃಷ್ಣೇಗೌಡರು ಗೊಲ್ಲರಕೊಪ್ಪಲು, ಜೋಗಿಕೊಪ್ಪಲು, ಸಿಂಗನಕುಪ್ಪೆ, ದೇವರ ಗುಡ್ಡೇನಹಳ್ಳಿ, ಮಾಕಬಳ್ಳಿ, ಮುಕ್ಕನಹಳ್ಳಿ, ಆನೆಕನ್ನಂಬಾಡಿ ಕಾಲೋನಿ, ದಾಸೇಗೌಡರ ಕೊಪ್ಪಲು, ನಂಜೇಗೌಡನ ಕೊಪ್ಪಲು, ಈರೇಗೌಡನ ಪಾಳ್ಯ, ಹೊನ್ನೇನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳನ್ನು ಸುತ್ತಿದ್ದ ಕೃಷ್ಣೇಗೌಡರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ನಡೆಸಿದರು.