ಬೇಲೂರು: ಬೇಲೂರು ಪಟ್ಟಣದ 8ನೇ ವಾರ್ಡಿನ ಚನ್ನಕೇಶವ ನಗರದಲ್ಲಿ 100 ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ನನಗೆ ಒಂದು ಅವಕಾಶ ಕೊಡಿ, 20-30 ವರ್ಷದಿಂದ ಕಾಣದ ಅಭಿವೃದ್ಧಿಯನ್ನ 22 ದಿನದಲ್ಲಿ ಮಾಡಿ ತೀರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್ ತಿಳಿಸಿದರು.
ಬೇಲೂರು ಪಟ್ಟಣದ 8ನೇ ವಾರ್ಡಿನ ಚನ್ನಕೇಶವ ನಗರದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾವುಗಳು ನೀಡಿದ ಎಲ್ಲಾ ಮಾತುಗಳನ್ನು ಕೇಳಿದ್ದೇನೆ. ನಾನು ಕೂಡಾ ಬಡ ಕುಟುಂಬದಿಂದ ಹುಟ್ಟಿ ಬಂದಿದ್ದು, ಬಡವರ ಕಣ್ಣೀರಿನ ಕಥೆ ಏನೆಂಬುದು ತಿಳಿದಿದ್ದೇನೆ. ಕಳೆದ ಚುನಾವಣೆಯಲ್ಲಿ ಸೋತ ಮರುದಿನದಿಂದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಬಡವರ ಕಷ್ಟದಲ್ಲಿ ಅಲ್ಪ ಸ್ವಲ್ಪ ಮಟ್ಟಿನ ಪಾಲುಗಾರನಾಗಿ ದುಡಿದಿದ್ದೇನೆ. ನಿಮ್ಮಿಂದ 20 ವರ್ಷಗಳಿಂದ ಮತ ಪಡೆದ ಚುನಾಯಿತ ರಾಜಕೀಯ ಪ್ರತಿನಿಧಿಗಳು ಹಾಗೂ ಮುಖಂಡರು ನಿಮ್ಮ ಭಾವನೆಗಳಿಗೆ ಸ್ಪಂದಿಸದೆ ಇರುವುದೇ ವಿಪರ್ಯಾಸ. ದಿನನಿತ್ಯ ದುಡಿಮೆ ಮಾಡಿ ಬದುಕುವ ನಿಮಗೆ ಸೂರು ಕಲ್ಪಿಸುವ ಕೆಲಸವನ್ನು ಮಾಡದಿರುವುದು ವಿಪರ್ಯಾಸ. ನಿತ್ಯ ದುಡಿಮೆ ಅವಲಂಬಿಸಿ ಬದುಕುವ ನಿಮ್ಮ ಬದುಕು ಕಷ್ಟಕರವಾಗಿದೆ. ಹಗಲು ದುಡಿದ ನಿಮಗೆ ರಾತ್ರಿ ನಿದ್ರಿಸಲು ಚಿಂತಿಸುವಂತಾಗಿದೆ. ನನಗೆ ಒಂದು ಬಾರಿ ಆಶೀರ್ವದಿಸಿ, ಕಳೆದ 20-30 ವರ್ಷಗಳಿಂದ ಆಗದ ಕೆಲಸವನ್ನು 22 ದಿನದಲ್ಲಿ ನಿಮ್ಮ ಬೇಡಿಕೆ ಅಂತೆ ನೀವು ವಾಸ ಮಾಡುವ ನಿಮ್ಮ ಮನೆಗಳ ಹಕ್ಕು ಪತ್ರ ಕೊಡಿಸುವುದರ ಜೊತೆಗೆ ನಿತ್ಯ ತಿರುಗಾಡುವ ಸಂಪರ್ಕ ರಸ್ತೆ, ಯುಜಿಡಿ, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡುವುದರ ಮೂಲಕ ಮಾದರಿ ನಗರವನ್ನಾಗಿ ಮಾಡಿ ತೋರಿಸುತ್ತೇನೆ ಎಂದರು.
ಈ ಸಂದರ್ಭ ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿ ಚನ್ನಕೇಶವ ನಗರದ ನಿವಾಸಿಗಳು ನನ್ನ ಕುಟುಂಬದ ಸದಸ್ಯರಿದ್ದಂತೆ. ನಿಮ್ಮ ಮನೆಯ ಒಬ್ಬ ಸದಸ್ಯನಾಗಿ, ಒಬ್ಬ ಮಗನಾಗಿ ನಿಮ್ಮ ಕಷ್ಟ ಸುಖಗಳಲ್ಲಿ ನನ್ನ ಕೈಯಲ್ಲಾದಷ್ಟು ಸ್ಪಂದಿಸಿದ್ದೇನೆ. ಆದರೆ ಇಲ್ಲಿ ಚುನಾಯಿತರಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಜನ ಪ್ರತಿನಿಧಿಗಳು ಇಲ್ಲಿಯವರೆಗೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡದೆ ಅವರಿಗೆ ಸಿಕ್ಕಂತ ಅವಧಿಯಲ್ಲಿ ಕಾಲಹರಣ ಮಾಡಿ ನಮ್ಮ ಬದುಕಿನಲ್ಲಿ ಚೆಲ್ಲಾಟ ಆಡಿದ್ದಾರೆ. ನಾನು ಹತ್ತಾರು ವರ್ಷಗಳಿಂದ ನಿಮ್ಮ ಭಾವನೆಗಳನ್ನು ಆಲಿಸಿ, ನನಗೆ ಯಾವುದೇ ಅಧಿಕಾರವಿಲ್ಲದಿದ್ದರು ನನ್ನ ಕೈಯಲ್ಲಾದಷ್ಟು ಸ್ಪಂದಿಸಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್ ಅಭ್ಯರ್ಥಿಯಾಗಿದ್ದು, ಅವರನ್ನು ನಾವು ಅತಿ ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿದ್ದೇ ಆದರೆ ಚನ್ನಕೇಶವ ನಗರವನ್ನು ಮಾದರಿ ನಗರವನ್ನಾಗಿ ಮಾಡುವ ನಿರೀಕ್ಷೆ ನನ್ನದಾಗಿದೆ. ಅದರಂತೆ ಸುರೇಶಣ್ಣನವರು ಸಹ ಇಲ್ಲಿನ ಜನರು ನಿಮ್ಮ ಬಳಿ ತಮ್ಮ ಅಳಲು ತೋಡಿಕೊಳ್ಳಲು ಬಂದಂತ ಸಂದರ್ಭದಲ್ಲಿ ಅವರಿಗೆ ಗೌರವಿತವಾಗಿ ಅವರ ಭಾವನೆಗಳಿಗೆ ಸ್ಪಂದಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಇಲ್ಲಿನ ಜನರು ಮತ್ತೊಮ್ಮೆ ನಿಮಗೆ ಆಶೀರ್ವದಿಸುತ್ತಾರೆ ಎಂದರು.
ಇದೇ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿಎಸ್ ಪ್ರಕಾಶ, ಚಿನ್ನೇನಹಳ್ಳಿ ಗಂಗೇಶ್, ಬಿಜೆಪಿ ನಗರ ಅಧ್ಯಕ್ಷ ವಿನಯ್ ಹಾಗೂ ಚೆನ್ನಕೇಶವ ನಗರದ ನಿವಾಸಿಗಳಾದ ಎಂ ಜಿ ನಿಂಗರಾಜ, ಮಂಜುನಾಥ, ಸಿದ್ದೇಶ್, ರಾಜು, ನಾಗೇಂದ್ರ, ವಿನಯ್, ಮುರುಳಿ, ಅಭಿಷೇಕ, ಮಂಜುನಾಥ, ನಾಗರಾಜ, ಗಿರೀಶ್, ಕುಮಾರ್, ನಾರಾಯಣಸ್ವಾಮಿ, ಗೀತಾ, ನೇತ್ರಾವತಿ, ಮೀನಾಕ್ಷಿ, ತೇಜಾ ಸೇರಿದಂತೆ ಇತರರು ಇದ್ದರು.