ಬೇಲೂರು: ಜೆಡಿಎಸ್ ಕಾರ್ಯಕರ್ತರು ಕ್ಷೇತ್ರದ ಜನರ ನಿರೀಕ್ಷೆಯಂತೆ ಹಾಸನ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಜಿಲ್ಲೆಯ ಬೇಲೂರು ತಾಲೂಕಿನ ಸಾಣೇನಹಳ್ಳಿ ಗ್ರಾಮದಲ್ಲಿ ಪಂಚರತ್ನ ಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಮಾಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಜನರ ಕುತೂಹಲಕ್ಕೆ ಶೀಘ್ರದಲ್ಲಿಯೇ ತೆರೆ ಎಳೆಯಲಾಗುವುದು. ಜನರು, ಕಾರ್ಯಕರ್ತರು ಏನು ಬಯಸಿದ್ದಾರೆ, ಯಾರೂ ಅಭ್ಯರ್ಥಿ ಆಗಬೇಕು ಎಂದು ಆಸೆ ಪಟ್ಟಿದ್ದಾರೆ ಅದರಂತೆ ಆಗಲಿದೆ. ಈ ಮೂಲಕ ಎಚ್.ಪಿ ಸ್ವರೂಪ್ ಪ್ರಕಾಶ ಅವರಿಗೆ ಟಿಕೆಟ್ ನೀಡುವ ಕುರಿತು ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಅವರು ಪಕ್ಷದ ರಾಜ್ಯದ್ಯಕ್ಷರು, ಎಚ್. ಡಿ. ದೇವೇಗೌಡರು ಅಂತಿಮವಾಗಿ ತೀರ್ಮಾನಿಸಿ ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದರು.
ಜೋಶಿ ವಿರುದ್ಧ ವಾಗ್ದಾಳಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು ಎರಡು ಮೂರು ದಿನಗಳಿಂದ ಬಿಜೆಪಿ ಘಟಾನುಘಟಿಗಳು ಹಾಸನ ಜಿಲ್ಲಾದ್ಯಂತ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ ಹಾಗೂ ಪ್ರಜಾ ಧ್ವನಿ ಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ನ ಮಹಾನ್ ನಾಯಕರು ದಾಳಿ ಮಾಡಿ ಹೋಗಿದ್ದು ಹಾಸನ ಜಿಲ್ಲೆಗೆ ಇವರ ಕೊಡುಗೆ ಏನು? ಎಂದು ಪ್ರಶ್ನಿಸಿದರು. ತಮ್ಮ ಕುಟುಂಬದಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳದ ಪ್ರಹ್ಲಾದ ಜೋಶಿ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಜೋಶಿ ಸಹೋದರರ ನಡುವಿನ ಭಿನ್ನಾಭಿಪ್ರಾಯ ನಮಗೆ ಗೊತ್ತಿದೆ ಮೊದಲು ಅದನ್ನು ಸರಿ ಮಾಡಿಕೊಳ್ಳಲಿ ಎಂದು ಕಿಡಿ ಕಾರಿದರು.
ಪ್ರಧಾನಿಯಾಗಲು ಕಾಂಗ್ರೆಸ್ ಕಾರಣವಲ್ಲ..!!
ಎಚ್.ಡಿ. ದೇವೇಗೌಡರು ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ೨೨ ಕಮ್ಯುನಿಸ್ಟ್ ಪಕ್ಷಗಳ ನಾಯಕರ ತೀರ್ಮಾನದಿಂದ ದೇವೇಗೌಡರು ಪ್ರಧಾನಿಯಾದರು ದೇವೇಗೌಡರ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಆಗಿದ್ದು, ಹೊರತು ಕಾಂಗ್ರೆಸ್ ನಾಯಕರ ನೆರವಿನಿಂದ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಜ್ಯೋತಿ ಬಸವ ಹಾಗೂ ವಿಪಿ ಸಿಂಗ್ ಅವರಿಗೆ ಪ್ರಧಾನಿ ಆಗಲು ಅವಕಾಶವಿತ್ತು ಆದರೆ ದೇವೇಗೌಡರ ನಿಷ್ಠೆ ಕಾರಣದಿಂದ ಪ್ರಧಾನಿ ಹುದ್ದೆ ಅಲಂಕರಿಸಿದರು ಈ ಕುರಿತು ಯಾವುದೇ ಚರ್ಚೆಗೆ ಸಿದ್ದ ಎಂದು ಕುಮಾರಸ್ವಾಮಿ ಹೇಳಿದರು.
ಅಭಿವೃದ್ಧಿಗಾಗಿ ಮಾತ್ರ ನಮ್ಮ ಕಾಂಪಿಟೇಷನ್
ನಮ್ಮ ಕುಟುಂಬದಲ್ಲಿ ಸ್ಪರ್ಧೆ ಕೇವಲ ರಾಜಕಾರಣದಲ್ಲಿ, ಜನರ ಸಂಕಷ್ಟ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಕಾಂಪಿಟೇಶನ್. ಆದರೆ ಬಿಜೆಪಿ ನಾಯಕರಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಹೇಗೆ ಲೂಟಿ ಮಾಡಬೇಕು ಎಂಬುದ ಚಿಂತೆಯಾಗಿದ್ದು ಇದಕ್ಕೆ ಅವರಲ್ಲಿ ಕಾಂಪಿಟೇಶನ್ ಇದೆ ಎಂದು ಲೇವಡಿ ಮಾಡಿದರು.
ಸಂಕಷ್ಟಕ್ಕೆ ಸ್ಪಂದಿಸದೆ: ಇಂದು ರೋಡ್ ಶೋ
ಪ್ರವಾಹ ಸಂಕಷ್ಟದಲ್ಲಿದ್ದ ಮನೆ ಮಠ ಕಳೆದುಕೊಂಡ ಬಡಜನರ ನೋವನ್ನು ಆಲಿಸಲು ಬರದ ಬಿಜೆಪಿ ನಾಯಕರು ಇಂದು ಮತದಾರರ ಗಮನ ಸೆಳೆಯಲು ರೋಡ್ ಶೋ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಮ್ಮ ಜೆಡಿಎಸ್ ಪಕ್ಷ ಜನಗಳ ಬದುಕು ಕಟ್ಟಿಕೊಡಬೇಕು ಎಂದು ಶ್ರಮಿಸುತ್ತಿದೆ. ನಾಲ್ಕು ಜನಕ್ಕೆ ಒಳ್ಳೆಯದು ಮಾಡಬೇಕು ಎನ್ನುವುದೇ ನಮ್ಮ ಗುರಿ. ಬಿಜೆಪಿಯವರು ಕಾಂಗ್ರೆಸ್ ನವರು ಮಹಾನ್ ಸುಳ್ಳುಗಾರರಾಗಿದ್ದು ಟಿಪ್ಪು, ಸಾವರ್ಕರ್ ಎಂದು ಮಾತನಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ ನಮಗೆ ಅದ್ಯಾವುದೋ ಇಲ್ಲ ಎಂದು ಹೇಳಿದರು.
ನವ ಕರ್ನಾಟಕ ಕೇವಲ ನಾಟಕ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ನಾನಾ ರೀತಿಯ ಭಾವಚಿತ್ರಗಳಿರುವ ಜಾಹೀರಾತನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಂದೂ ಸಹ ನವ ಕರ್ನಾಟಕ ಸಮ್ಮೇಳನ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ಸಂವಾದ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಇದಕ್ಕೆ ಸಭಾಪತಿ ಅಧ್ಯಕ್ಷತೆ ವಹಿಸಿದ್ದು ಇಷ್ಟು ವರ್ಷ ಉತ್ತರ ಕರ್ನಾಟಕಕ್ಕೆ ಏನು ಮಾಡದ ಬಸವರಾಜ ಬೊಮ್ಮಾಯಿ ಅವರು ಇದೀಗ ಸಂವಾದ ಎಂಬ ನಾಟಕ ಮಾಡಲು ಹೊರಟಿದ್ದಾರೆ. ಅಲ್ಲಿನ ಮಹಿಳೆಯರು ಈಗಲೂ ಸಹ ಶೌಚಾಲಯ ಇಲ್ಲದೆ ಪರಿತಪಿಸುತ್ತಿದ್ದು, ರಾಜ್ಯ, ರಾಷ್ಟ್ರೀಯ ಹೆದ್ದಾರಿ ನವೀಕರಣ ಬಿಟ್ಟರೆ ಹಳ್ಳಿಗಳ ರಸ್ತೆ ಹದಗೆಟ್ಟಿದೆ. ಸಂವಾದದಿಂದ ಇವೆಲ್ಲ ಸಮಸ್ಯೆ ಬಗೆಹರಿಯುವುದೇ? ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಯಾರು ಬರಬೇಕು: ಜನ ತೀರ್ಮಾನ ಮಾಡ್ತಾರೆ: ಆರ್.ಅಶೋಕ್ ಅಲ್ಲ
೨೦೨೩ ನೇ ಚುನಾವಣೆಯಲ್ಲಿ ಯಾವ ಸರ್ಕಾರ ಎಷ್ಟು ದಿನ ಇರುತ್ತೆ ಅನ್ನೋದನ್ನ ಜನರು ತೀರ್ಮಾನ ಮಾಡುತ್ತಾರೆ ಆರ್ ಅಶೋಕ್ ಅಲ್ಲ ಎಂದು ಜರಿದ ಕುಮಾರಸ್ವಾಮಿ ಆ ದೇವರು ಯಾರು ಅಧಿಕಾರಕ್ಕೆ ಬರಬೇಕು ಐದು ವರ್ಷ ಯಾರು ಸರ್ಕಾರ ನಡೆಸಬೇಕು ಎಂಬುದನ್ನು ತೀರ್ಮಾನ ಮಾಡಲಿದ್ದಾರೆ ಎಂದರು.
ಜೆ.ಪಿ ನಡ್ಡಾ ಯಾರು….!!
ಜೆ.ಪಿ ನಡ್ಡಾ ಯಾರು ಕರ್ನಾಟಕದ ನಕ್ಷೆ ಅವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಆಪರೇಷನ್ ಕಮಲದಲ್ಲಿ ಯಾರ್ಯಾರು ಏನೇನು ಸಂಬಂಧ ಇಟ್ಟುಕೊಂಡಿದ್ದರು ಯಾರು ಯಾರಿಗೆ ಸುಪಾರಿ ಕೊಡಿಸಿದರು ಎಂದು ಗೊತ್ತಿದೆ. ಇತ್ತೀಚಿಗೆ ಬಿಜೆಪಿ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದು, ಬಿಜೆಪಿಯು ರಾಜ್ಯಕ್ಕೆ ನೋಡುತ್ತಿರುವ ಹೊಸ ಯುಗ ಎಂಬುದಕ್ಕೆ ಇದೇ ಉದಾಹರಣೆ. ರಾಜ್ಯದಲ್ಲಿ ಲೂಟಿ ನಡೆಯುತ್ತಿದ್ದರು ಏನು ಗೊತ್ತಿಲ್ಲದ ರೀತಿ ಕಣ್ಣು ಮುಚ್ಚಿ ಲೂಟಿ ಮಾಡುತ್ತಿದ್ದು, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜನರಿಗೆ ತಿಳಿಯುವುದಿಲ್ಲವೇ ಎಂದು ಲೇವಡಿ ಮಾಡಿದರು. ಮಹದಾಯಿ ವಿಚಾರದಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಗುಳಿಹಟ್ಟಿ ಶೇಖರ್ ಅವರೇ ಬಹಿರಂಗಪಡಿಸಿದ್ದಾರೆ ಎಂದರು.
ರೈತ ಯುವಕರ ಮದುವೆಯಾದರೆ ಎರಡು ಲಕ್ಷ ಹಣ
ಇತ್ತೀಚೆಗೆ ಜನರು ನಮ್ಮ ತಲೆಗೆ ಒಂದು ಸಮಸ್ಯೆಯನ್ನು ಪದೇ ಪದೇ ಗಮನಕ್ಕೆ ತರುತ್ತಿದ್ದಾರೆ. ನಾನು ಎಲ್ಲೆ ಹೋದರು ಚೀಟಿ ಕೊಡುತ್ತಿದ್ದಾರೆ. ನಮ್ಮ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ನಮ್ಮ ಊರಿನಲ್ಲಿ ೩೦-೪೦ ಜನ ಯುವಕರಿಗೆ ಮದುವೆಯಾಗಿಲ್ಲ ಅಂತ ಹೇಳಿದ್ದಾರೆ. ಆ ಮೂಲಕ ಇದಕ್ಕೆ ಒಂದು ಪರಿಹಾರ ಹುಡುಕಲು ಕೇಳ್ತಿದ್ದಾರೆ. ಮೊನ್ನೆ ಅದಿಚುಂಚನಗಿರಿ ಮಠದಲ್ಲಿ ವಧು-ವರರ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ಮಠದಲ್ಲಿ ಕೇವಲ ೭೦೦-೮೦೦ ಹೆಣ್ಣು ಮಕ್ಕಳು ಮಾತ್ರ ಬಂದರೂ, ಯುವಕರು ೭-೮ ಸಾವಿರ ಮಂದಿ ಬಂದ ಕಾರಣ ಲಾಠಿ ಚಾರ್ಜ್ ಮಾಡಬೇಕಾಯಿತು. ನೀವು ಅನ್ನದಾತರು, ನಿಮ್ಮ ಬದುಕು ಈ ರೀತಿ ಆದರೆ ದೇಶಕ್ಕೆ ಭವಿಷ್ಯವಿಲ್ಲ, ಆದ್ದರಿಂದ ರೈತ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಎರಡು ಲಕ್ಷ ರೂಪಾಯಿ ಹಣ ನೀಡುವ ತೀರ್ಮಾನ ಮಾಡಿದ್ದೇವೆ ಎಂದು ಘೋಷಣೆ ಮಾಡಿದರು
ಡಿ.ಕೆ.ಶಿ ದೇವೇಗೌಡರ ವಿರುದ್ಧ ಮಾಡಿದ ಪಿತೂರಿ ಮರೆತಿಲ್ಲ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ವಿರುದ್ಧ ಕಿಡಿ ಕಾರಿದ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಜಂಟಿ ಶಾಸಕಾಂಗ ಸಭೆ ಮಾಡಲು ಆಗಲಿಲ್ಲ ಇವರ ಯೋಗ್ಯತೆಗೆ ಒಬ್ಬ ಮುಖ್ಯಮಂತ್ರಿಯನ್ನು ಚಪ್ರಾಸಿತರ ಹೋಟೆಲ್ ಬಳಿ ನಿಲ್ಲಿಸಿದರು. ಇದೆಲ್ಲಾ ಸಹಿಸಿಕೊಂಡಿದ್ದು ನನ್ನ ರೈತರ ಸಾಲ ಮನ್ನಾ ಮಾಡಲಿಕ್ಕಾಗಿ, ಅಧಿಕಾರಕಲ್ಲ ಎಂದರು. ದೇವೇಗೌಡರನ್ನು ಕನಕಪುರದಲ್ಲಿ ಗೆಲ್ಲಿಸಿದೆವು ಎಂದು ಹೇಳುತ್ತಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಾಸನದಲ್ಲಿ ದೇವೇಗೌಡರು ಸೋತಿದ್ದಾಗ ಬೈ ಎಲೆಕ್ಷನ್ ನಡೆಯಿತು . ಅವರನ್ನು ಮತ್ತೆ ರಾಜಕೀಯದಲ್ಲಿ ತಲೆ ಎತ್ತಬಾರದು ಅಂದುಕೊಂಡು ಡಿ.ಕೆ ಶಿವಕುಮಾರ್ ದೇವೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲೆಲ್ಲಿಂದ ಜನರನ್ನು ತುಂಬಿಕೊಂಡು ಬಂದರು? ಕಳ್ಳ ಮತದಾನ ಮಾಡಿಸಿ ದೇವೇಗೌಡರನ್ನು ಸೋಲಿಸಲು ಮುಂದಾದರು. ಇಂತಹವರು ಹಿತೈಷಿಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಮೊಸಳೆ ಕಣ್ಣೀರು
ಇದೀಗ ಹಾಸನ ಜಿಲ್ಲೆಗೆ ಬಂದು ಜನಗಳ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರಿಗೆ ಗೌರವ ಕೊಟ್ಟಿದ್ದೇವೆ ಎನ್ನುತ್ತಾರೆ ನಮಗೆ ಒಂದು ಅವಕಾಶ ಕೊಡಿ ಎಂದು ಪ್ರಚಾರ ಮಾಡುತ್ತಾರೆ. ಹೀಗೆಲ್ಲಾ ಮಾತನಾಡುವವರು ಹಾಸನ ಜಿಲ್ಲೆಗೆ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಡಿ.ಕೆ ಶಿವಕುಮಾರ ಜನಗಳ ಜೀವನ ಕಟ್ಟಲಿಕ್ಕೆ ಬರುತ್ತಿದ್ದಾರೆಯೋ ಅಥವಾ ಇನ್ನೊಂದು ೧೦ ಮಾರ್ಟ್ ಕಟ್ಟಲು ಅಧಿಕಾರ ಕೇಳ್ತಿದ್ದಾರೋ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಎಲ್ಲರೂ ನಮ್ಮವರೇ ಎಲ್ಲರೂ ಕನ್ನಡಿಗರೇ, ಕರ್ನಾಟಕ ರಾಜ್ಯದ ಮಣ್ಣಿನ ಮಕ್ಕಳೇ, ಆದರೆ ಮಣ್ಣಿನ ಮಕ್ಕಳಲ್ಲಿಯೂ ತರಾವರಿ ಇದೆ. ಐದು ಬೆರಳು ಒಂದೇ ತರ ಇರುವುದಿಲ್ಲ. ಮಣ್ಣಿನ ಮಕ್ಕಳು ಎಲ್ಲರಲ್ಲೂ ಒಂದೇ ಗುಣ ಇರುವುದಿಲ್ಲ, ಯಾವ್ಯಾವ ಗುಣದವರಿಗೆ ಏನನ್ನು ಆಶೀರ್ವಾದ ಮಾಡಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.