ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಘೋಷಣೆ ಕುರಿತು “ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಈಗಾಗಲೇ ಹಲವು ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ಸ್ಪಷ್ಟಪಡಿಸಿದ್ದೇನೆ. ಅದರಂತೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಹೇಳಿದ ಅವರು ಈ ವಿಚಾರದಲ್ಲಿ ನನ್ನ ಸ್ಟ್ಯಾಂಡ್ ಎಂದಿಗೂ ಬದಲಾಗುವುದಿಲ್ಲ ಎಂದರು.
ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲುವ ಶಕ್ತಿ ಜೆಡಿಎಸ್‌ಗೆ ಇದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಸೆಯೂ ಕೂಡ ಅದೇ ಆಗಿದೆ ಎಂದರು. ವೈಎಸ್‌ವಿ ದತ್ತ ಮತ್ತೆ ಜೆಡಿಎಸ್ ಸೇರ್ಪಡೆಯಾಗುವವರೆ? ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿಯವರು “ನಮ್ಮದು ಸಣ್ಣ ಪಕ್ಷ ಅವರು ಇಂಟರ್ನ್ಯಾಷನಲ್ ಪಕ್ಷದ ಜೊತೆ ಸೇರಲು ಹೊರಟಿದ್ದಾರೆ” ನಮ್ಮ ಸಣ್ಣ ಪಕ್ಷದಲ್ಲಿ ಅವರಿಗೆ ಎಲ್ಲಿದೆ ಜಾಗ ಅವರ ಬಗ್ಗೆ ನಾನು ಇಲ್ಲಿ ಏನನ್ನು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ಪಟ್ಟು ಬಿಡದ ಭವಾನಿ ರೇವಣ್ಣ-ಸ್ವರೂಪ
ಟಿಕೆಟ್ ಹಂಚಿಕೆ ಗೊಂದಲ ಮುಂದುವರೆದಿರುವಾಗಲೇ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಪಟ್ಟು ಸಡಿಲಿಸದೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಮುಂದುವರೆದಿದ್ದಾರೆ. ಹಲವು ಸುತ್ತಿನ ಮಾತುಕತೆ ನಂತರವೂ ಸಹ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ರೇವಣ್ಣ ಕುಟುಂಬದಿಂದ ಪದೇ ಪದೇ ವ್ಯಕ್ತವಾಗುತ್ತಿದ್ದು, ಈ ನಡುವೆ ಸ್ವರೂಪ ಪ್ರಕಾಶ ಅವರು ಸಹ ಹಾಸನ ವಿಧಾನಸಭಾ ಕ್ಷೇತ್ರದ ಸುತ್ತ ಮಿಂಚಿನ ವೇಗದಲ್ಲಿ ಪ್ರಚಾರವನ್ನು ಮುಂದುವರೆಸಿದ್ದಾರೆ. ಈಗಾಗಲೇ ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ಘೋಷಣೆ ಅಂತಿಮಗೊಳಿಸಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವುದು ಜೆಡಿಎಸ್ ಪಕ್ಷಕ್ಕೆ ಯಾವ ರೀತಿ ಲಾಭವಾಗಲಿದೆ ಅಥವಾ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.