ಬೇಲೂರು: ಜಾತಿ ಜನಾಂಗದ ಜೊತೆ ತಾವೇಂದಿಗೂ ರಾಜಕೀಯ ಮಾಡಿಲ್ಲ, ತಮ್ಮ ಸೋಲಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ದೂರುವುದಿಲ್ಲ. ಸೋತನೆಂದು ಕೈಕಟ್ಟಿ ಕೂರದೆ ಜೆಡಿಎಸ್ ಭದ್ರಕೋಟೆಯನ್ನು ಮತ್ತೆ ಬಲಪಡಿಸುವುದಾಗಿ ಶಾಸಕ ಕೆ.ಎಸ್ ಲಿಂಗೇಶ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಬಾರಿ ನಡೆದ ಚುನಾವಣೆಯಲ್ಲಿ ತಮಗೆ ರಾಜ್ಯ ಮಟ್ಟದ ನಾಯಕರು ಬೆಂಬಲ ನೀಡಿದ್ದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಪರವಾಗಿ ಇಳಿವಯಸ್ಸಿನಲ್ಲೂ ಬಂದು ಪ್ರಚಾರ ನಡೆಸಿದರು. ತಾವು ಜನರ ಜೊತೆ ಬೆರೆತಿಲ್ಲ ಎಂಬ ಸುಳ್ಳು ಹೇಳಿಕೆಗಳನ್ನು ಪ್ರಚಾರ ಪಡಿಸಿ ಹಣದ ಹೊಳೆಯನ್ನೇ ಹರಿಸಿದ ಪರಿಣಾಮ ತಾವು ಸೋಲನ್ನು ಅನುಭವಿಸಬೇಕಾಯಿತು. ಸ್ಥಳೀಯವಾಗಿ ತಾಲೂಕಿನ ಜೆಡಿಎಸ್ ರಾಜಕೀಯ ಮುಖಂಡರು ಮತ್ತು ತಾಲೂಕು ಮಟ್ಟದ ಹಾಗೂ ನನಗೆ ಮತ ನೀಡಿರುವ ತಾಲೂಕಿನ ಮತದಾರ ಬಂಧುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ ನೂತನ ಶಾಸಕರಾಗಿ ಆಯ್ಕೆಯಾಗಿರುವ ಹುಲ್ಲಳ್ಳಿ ಸುರೇಶ್ ರವರಿಗೆ ಅಭಿನಂದನೆಗಳು. ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿ ಹುಲ್ಲಳ್ಳಿ ಸುರೇಶ್ ಅವರನ್ನು ಶಾಸಕರಾಗಿ ಮಾಡಿದ್ದಾರೆ, ಶಾಸಕರು ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲಿ, ಅವರೊಂದಿಗೆ ನಾವು ಸಹ ಸಲಹೆ ಸಹಕಾರ ನೀಡುತ್ತೇವೆ ಎಂದರು.
ತಮ್ಮ ಸೋಲಿಗೆ ಬೇರೆ ಯಾರನ್ನು ದೂಷಿಸದೆ ತಾವೇ ನೈತಿಕ ಹೊಣೆ ಹೊರುತ್ತೇನೆ. ನನ್ನ ಮೇಲೆ ಅನ್ಯ ಪಕ್ಷದವರು ದುರುದ್ದೇಶದಿಂದಲೇ ಬಗರ್ ಹುಕುಂ ಭ್ರಷ್ಟಾಚಾರದ ಅರೋಪ ಹೊರೆಸಿದರು. ಆದರೆ ಕ್ಷೇತ್ರದ ಜನತೆಗೆ ಗೊತ್ತಿರುವಂತೆ ನಾನು ಒಂದು ಇಂಚು ಭೂಮಿಯ ಹಗರಣ ಅಥವಾ ಹಣವನ್ನು ಪಡೆದಿಲ್ಲ, ಕಳೆದ ಬಾರಿಗಿಂತ 25 ಸಾವಿರ ಮತಗಳು ಇಳಿಕೆಯಾಗಿರುವುದು ಸತ್ಯ, ಜನತೆ ನೀಡಿದ ತೀರ್ಪು ನಾವು ಗೌರವಿಸುತ್ತೇವೆ. ನೂತನವಾಗಿ ಶಾಸಕರಾದ ಹೆಚ್.ಕೆ ಸುರೇಶ್ ರವರು ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಲಿ ಎಂದು ಅಭಿನಂದನೆ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ತೋಚ ಅನಂತ ಸುಬ್ಬರಾಯ ಮಾತನಾಡಿ ನಮ್ಮ ಅಭ್ಯರ್ಥಿ ಮಾಜಿ ಶಾಸಕರಾದ ಲಿಂಗೆಶ್ ಕಳೆದ 5 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಜನ ತಿರಸ್ಕಾರ ಮಾಡಿದ್ದಾರೆ. ಮತದಾರರ ತೀರ್ಪಿಗೆ ಪಕ್ಷದ ತಾಲೂಕು ಅಧ್ಯಕ್ಷರಾಗಿ ನೈತಿಕ ಹೊಣೆಯನ್ನು ನಾನೇ ಸ್ವೀಕರಿಸುತ್ತೇನೆ. ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಬರಲು ಆಡಳಿತ ಪಕ್ಷದ ವಿರೋಧಿ ಅಲೆ ಹೆಚ್ಚಾಗಿತ್ತು. ಬದಲಾವಣೆ ಬಯಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಾಯಕತ್ವ ಒಪ್ಪಿ ಈ ಬಾರಿ ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ಆದರೆ ನಮ್ಮ ಕಾರ್ಯಕರ್ತರ ಪಡೆ ಇನ್ನು ಗಟ್ಟಿಯಾಗಿದ್ದು, ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾ.ಪಂ. ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹೊಸ ನಾಯಕತ್ವದಲ್ಲಿ ಎದುರಿಸುವ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಲಿದ್ದೇವೆ ಎಂದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಂ.ಎ ನಾಗರಾಜ್ ಮಾತನಾಡಿ ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ನಮ್ಮ ಶಾಸಕರು ಅಭಿವೃದ್ಧಿಗೆ ಒತ್ತು ನೀಡಿದ್ದರು. ಆದರೆ ಮತದಾರರು ಅದನ್ನು ಪುರಸ್ಕರಿಸದೆ ತಮ್ಮದೇ ಆದ ತೀರ್ಪು ನೀಡಿದ್ದಾರೆ. ಸೋಲಿನ ಹೊಣೆಯನ್ನು ಎಲ್ಲಾ ಕಾರ್ಯಕರ್ತರು ಸಮನಾಗಿ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಲೋಕಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಗಮನ ಹರಿಸಿ ಈ ಬಾರಿ ಆದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿಟ್ರುವಳ್ಳಿ ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಿ. ಟಿ. ಇಂದಿರಾ, ಯುವ ಜೆಡಿಎಸ್ ಅಧ್ಯಕ್ಷ ಬಿ.ಸಿ ಉಮೇಶ್ ಇದ್ದರು.