ಹಾಸನ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲ ಯೋಜನೆಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ರಾಜ್ಯದ ಜನ ಸಾಮಾನ್ಯರ ಜೊತೆ ಹಲವಾರು ಸಭೆಗಳನ್ನು ನಡೆಸಿದ್ದು ಈಗಾಗಲೇ ೧೩ ಜಿಲ್ಲೆಗಳಿಗೆ ಕೆಆರ್‌ಎಸ್ ಪಕ್ಷ ಸಂಚಾರ ನಡೆಸಿದೆ. ಮುಂದಿನ ಚುನಾವಣೆಯಲ್ಲಿ ೨೨೪ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖಂಡ ಉಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಸರ್ಕಾರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರು, ಚಿಂತಕರು, ತಜ್ಞರ ಜೊತೆ ಹಲವಾರು ಸಭೆಗಳನ್ನು ನಡೆಸಿದ್ದು ನಂತರ ಪಕ್ಷವು ಪ್ರಣಾಳಿಕೆ ಸಿದ್ಧಪಡಿಸಿದೆ.
ಇವುಗಳಲ್ಲಿ ಪ್ರಮುಖವಾಗಿ ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ ಮೂರು ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡುವುದು, ಭ್ರಷ್ಟಾಚಾರರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ನೀಡುವುದು, ರಾಜ್ಯದಲ್ಲಿ ಬಡತನ ನಿವಾರಣೆಗೆ ಸಂಪೂರ್ಣ ಮದ್ಯ ನಿಷೇಧ, ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ ಗ್ರಾಮ ಸ್ವರಾಜ್ಯ, ಎಲ್ಲಾ ತರಹದ ಮಾಸಾಶನಗಳಿಗೆ ಕನಿಷ್ಠ ೩೦೦೦ಕ್ಕೆ ಏರಿಕೆ, ಸೇರಿದಂತೆ ಹಲವು ಜನಪರ ಪ್ರಣಾಳಿಕೆಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಇಂದಿನ ಭ್ರಷ್ಟಾಚಾರದ ಆಡಳಿತ ನಡುವೆ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಕನಿಷ್ಠ ವೆಚ್ಚದಲ್ಲಿ ಚುನಾವಣೆ ಎದುರಿಸುತ್ತಿದ್ದು, ಸಾರ್ವಜನಿಕರು ನೀಡುವ ದೇಣಿಗೆಯಿಂದ ಆಯಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ.
ಹಾಸನ ಜಿಲ್ಲೆಯಿಂದಲೂ ಸಹ ೭ ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಉತ್ತಮ ಆಡಳಿತಕ್ಕೆ ಹಾಗೂ ಭ್ರಷ್ಟಾಚಾರ ಮುಕ್ತ ಸೇವೆಯನ್ನು ನೀಡಲು ಕೆಆರ್‌ಎಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್, ನಾಗರಾಜು, ಆದೇಶ ಇದ್ದರು.