ಹಾಸನ: ಜಿಲ್ಲೆಯಲ್ಲಿ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ನಾಚುವಂತೆ ಅಬ್ಬರದ ಪ್ರಚಾರ ನಡೆಸುತ್ತಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಟಿ ಕೃಷ್ಣೇಗೌಡರು ಗುರುವಾರ ರಾಮನಾಥಪುರ ಹೋಬಳಿಯ ಹಲವಾರು ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ನಡುವೆ ರಾಮನಾಥಪುರ ಹೋಬಳಿಯ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಎಸ್ ಶಂಕರ್ ಕೂಡ ಕೃಷ್ಣೇಗೌಡರಿಗೆ ತನ್ನ ಬೆಂಬಲ ಘೋಷಿಸಿದ್ದಾರೆ.
ರಾಮನಾಥಪುರ ಹೋಬಳಿಯ ಗಂಗೂರು, ಹನ್ಯಾಳು, ರುದ್ರಪಟ್ಟಣ, ವಡ್ಡರಹಳ್ಳಿ, ಮತ್ತಿಗೋಡು, ಸೋಮಪುರ, ಲಕ್ಕೂರು, ಮಲ್ಲಾಪುರ, ಹರಳಹಳ್ಳಿ, ಭದ್ರನಹಳ್ಳಿ, ಆನಂದಪುರ, ಕಾಳೇನಹಳ್ಳಿ, ರಾಗಿಮರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಗುರುವಾರ ಸಂಚರಿಸಿ ಮತಯಾಚನೆ ನಡೆಸಿದರು. ಕೆಲ ಗ್ರಾಮಗಳಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮಗಳಿಗೆ ತೆರಳಿದ ಕೃಷ್ಣೇಗೌಡರು ಆಯಾ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ತೆರೆದ ವಾಹನದಲ್ಲಿ ನಿಂತು ಮೆರವಣಿಗೆ ನಡೆಸಿ ಜನರಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಇದೇ ವೇಳೆ ಕೆಲವೆಡೆ ಜೆಸಿಬಿಗಳ ಮೂಲಕ ಕೃಷ್ಣೇಗೌಡರ ಮೇಲೆ ಹೂವಿನ ಮಳೆ ಸುರಿಸಲಾಯಿತು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮಾಜಿ ಮುಖಂಡ ಎಚ್.ಎಸ್.ಶಂಕರ್, ಇಷ್ಟು ವರ್ಷಗಳ ಕಾಲ ಕ್ಷೇತ್ರದ ರಾಜಕಾರಣಿಗಳನ್ನು ನೋಡಿದ್ದು, ಅವರನ್ನೆಲ್ಲಾ ನಂಬಿ ಬೆಂಬಲ ಕೊಡುತ್ತಾ ಬಂದಿದ್ದೆ, ಆದರೆ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರ ಸ್ವಾಭಿಮಾನ, ರಕ್ಷಣೆ ದೃಷ್ಟಿಯಿಂದ ಕಣಕ್ಕಿಳಿದಿರುವ ಕೃಷ್ಣೇಗೌಡರಿಗೆ ಮತ ನೀಡುವ ಮೂಲಕ ಕ್ಷೇತ್ರದ ಹೊಸ ಅಭಿವೃದ್ಧಿಗೆ ಪ್ರತಿಯೊಬ್ಬರು ಮುಂದಾಗೋಣ ಎಂದು ಕರೆ ನೀಡಿದರು.
ಕೃಷ್ಣೇಗೌಡರು ಹೋದ ಕಡೆಗಳಲ್ಲೆಲ್ಲಾ ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಈವರೆಗೆ ವಿವಿಧ ಪಕ್ಷಗಳಲ್ಲಿದ್ದ ಮುಖಂಡರು ಸ್ಥಳೀಯರಾದ ಕೃಷ್ಣೇಗೌಡರಿಗೆ ತಮ್ಮ ಬೆಂಬಲ ಸೂಚಿಸಿದರು.