ಹಾಸನ: ಅರಸೀಕೆರೆಯ ಜನಪ್ರಿಯ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಇಂದು ಅರಸೀಕೆರೆಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ.
ಜೆಡಿಎಸ್ ಪಕ್ಷದಲ್ಲಿದ್ದ ಕೆ.ಎಂ ಶಿವಲಿಂಗೇಗೌಡರು ಈ ಹಿಂದೆ ಮೂರು ಬಾರಿ ಶಾಸಕರಾಗಿ ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್ ಸಮಸ್ಯೆಗಳಿಲ್ಲದಂತೆ ಎಲ್ಲವನ್ನೂ ಜನರಿಗೆ ನೀಡುವಲ್ಲಿ ಶಾಸಕರಾಗಿದ್ದಾಗ ಅತ್ಯಂತ ಯಶಸ್ವಿಯಾಗಿದ್ದಾರೆ.
ಕೆ.ಎಂ. ಶಿವಲಿಂಗೇಗೌಡರು ಅನೇಕ ಯೋಜನೆಗಳನ್ನು ಕ್ಷೇತ್ರಗಳಿಗೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಅನೇಕ ಅನುದಾನಗಳನ್ನು ತಂದಿದ್ದಾರೆ. ಇವರ ಅಭಿವೃದ್ಧಿಯ ಕಾರ್ಯಶೈಲಿಯನ್ನೇ ನೋಡಿ ಇಲ್ಲಿ ಮೂರು ಬಾರಿ ಇವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಆದರೆ ಬದಲಾದ ರಾಜಕೀಯದ ಬೆಳವಣಿಗೆಯಲ್ಲಿ ಈಗಾಗಲೇ ಜೆಡಿಎಸ್‌ನಿಂದ ಹೊರ ಬಂದಿರುವ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಇದೇ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕೆ.ಎಂ.ಶಿ ತಮ್ಮ ರಾಜಕೀಯ ವಿರೋಧಿಗಳಿಗೆ ಠಕ್ಕರ್ ನೀಡಲು ಮುಂದಾಗಿದ್ದಾರೆ.
ಅಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಮುಖಂಡ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ, ಸೇರಿದಂತೆ ಹತ್ತಾರು ಹಿರಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು ಆ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡರನ್ನು ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ವರಿಷ್ಠರು ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಈಗಾಗಲೇ ಶಿವಲಿಂಗೇಗೌಡರನ್ನು ಸೋಲಿಸಲೇಬೇಕೆಂದು ತೊಡೆ ತಟ್ಟಿರುವ ಜೆಡಿಎಸ್ ಹಾಗೂ ಕಳೆದ ಒಂದೆರಡು ವರ್ಷದಿಂದ ತಾಲೂಕಿನಲ್ಲಿ ಸಕ್ರಿಯ ರಾಜಕಾರಣ ಮಾಡುತ್ತಾ ಶಿವಲಿಂಗೇಗೌಡರನ್ನು ಮಣಿಸಿ ತಾನು ಗೆದ್ದು ಬೀಗಬೇಕೆಂದು ತಂತ್ರ – ಕುತಂತ್ರ- ಪ್ರತಿ ತಂತ್ರ ಎಣೆದಿರುವ ಎನ್.ಆರ್. ಸಂತೋಷ ಅಂತಹವರಿಗೆ ಈ ಸಮಾರಂಭ ಹೊಸ ಸಂದೇಶ ರವಾನಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.