ಹಾಸನ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯ ಆಪರೇಷನ್ ನಿಂದ ಪಕ್ಷವನ್ನು ಉಳಿಸಿಕೊಳ್ಳಲು ಜೆಡಿಎಸ್ ಆಯ್ದುಕೊಂಡಿದ್ದ ಕುಟುಂಬ ರಾಜಕಾರಣದ ಮಾದರಿಯೇ ಈಗ ಆ ಪಕ್ಷಕ್ಕೆ ಮುಳುವಾಗಲಾರಂಭಿಸಿದೆ. ಹಲವು ವಿಘಟನೆಗಳ ನಂತರವೂ ಕೆಲವು ಜಿಲ್ಲೆಗಳಲ್ಲಿ ಪಕ್ಷದ ಬಲ ಕುಗ್ಗದಂತೆ ತಡೆದಿದ್ದ ಸಹೋದರರೇ ಈಗ ಟಿಕೆಟ್ ಹಂಚಿಕೆಯಲ್ಲಿ ಜಟಾಪಟಿಗೆ ಇಳಿದಿರುವುದು ಈ ಚುನಾವಣೆಯ ಹೊಸ ಬೆಳವಣಿಗೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಎಚ್.ಡಿ. ರೇವಣ್ಣ ಕುಟುಂಬ ಮತ್ತು ಎಚ್.ಡಿ. ಕುಮಾರಸ್ವಾಮಿ ಮಧ್ಯೆ ನಡೆಯುತ್ತಿರುವ ಹಗ್ಗಜಗ್ಗಾಟ ಇಡೀ ಪಕ್ಷವನ್ನೇ ಸಂಕಷ್ಟದ ಸುಳಿಯಲ್ಲಿ ಕಟ್ಟಿ ಹಾಕುವ ಸೂಚನೆಗಳನ್ನು ನೀಡುತ್ತಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ತವರು ಜಿಲ್ಲೆ ಹಾಸನ, ಒಕ್ಕಲಿಗರ ಬಾಹುಳ್ಯವಿರುವ ರಾಮನಗರ, ಮಂಡ್ಯ, ಕೋಲಾರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಗೆಲುವು ಅನಾಯಾಸ ಎಂಬ ಪರಿಸ್ಥಿತಿ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ, ಹಾಗೆ ಗೆದ್ದವರು ಎದುರಾಳಿ ಪಕ್ಷಗಳ ’ಆಪರೇಷನ್’ಗೆ ಸಿಲುಕಿ ಪಕ್ಷಾಂತರಗೊಳ್ಳುತ್ತಿದ್ದರು. ಪಕ್ಷದ ಶಾಸಕರ ಸಾಲು, ಸಾಲು ವಲಸೆಯಿಂದ ಕಂಗೆಟ್ಟ ಜೆಡಿಎಸ್ ವರಿಷ್ಠರು, ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದ ಕ್ಷೇತ್ರಗಳಲ್ಲಿ ಮನೆ ಮಂದಿಯನ್ನೇ ಕಣಕ್ಕಿಳಿಸಿ ಶಾಸನ ಸಭೆಗೆ ಕಳಿಸುವ ಮೂಲಕ ಬಲಾಬಲ ಕಾಯ್ದುಕೊಳ್ಳುವ ಸಂಕಷ್ಟ ಪರಿಹಾರ ಸೂತ್ರವೊಂದನ್ನು ನೆಚ್ಚಿ ಕೊಂಡಿದ್ದರು.
ಕೆಲವು ದಶಕಗಳವರೆಗೂ ದೇವೇಗೌಡರ ಕುಟುಂಬದ ಬೆರಳೆಣಿಕೆಯ ಸದಸ್ಯರು ಮಾತ್ರ ಸಕ್ರಿಯ ರಾಜಕಾರಣದಲ್ಲಿದ್ದರು. ಹಿರಿಯ ಮಗ ಎಚ್.ಡಿ. ರೇವಣ್ಣ ದೀರ್ಘಕಾಲದಿಂದ ಶಾಸಕರಾಗಿದ್ದು, ಹಾಸನ ಜಿಲ್ಲೆಯ ರಾಜಕಾರಣದ ಮೇಲೆ ಬಲವಾದ ಹಿಡಿತ ಸಾಧಿಸಿದ್ದಾರೆ. ನಂತರ ರಾಜಕೀಯ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ, ಶಾಸಕ, ಸಂಸದರಾಗುವ ಜತೆಗೆ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದರು. ಈಗ ಗೌಡರ ಕುಟುಂಬದಲ್ಲಿ ಇಬ್ಬರು ಸಂಸದರು, ಮೂವರು ಶಾಸಕರು, ವಿಧಾನ ಪರಿಷತ್‌ನ ಒಬ್ಬ ಸದಸ್ಯ ಇದ್ದಾರೆ.
ಬೇರೆಯವರನ್ನು ಕರೆತಂದು ಟಿಕೆಟ್ ನೀಡಿ, ಗೆಲ್ಲಿಸಬಹುದು. ಆದರೆ, ಗೆದ್ದ ನಂತರ ಅವರ ಪಕ್ಷಾಂತರ ತಡೆಯುವುದು ಕಷ್ಟ. ಹೀಗಾಗಿ ಪಕ್ಷ ಉಳಿಸಿಕೊಳ್ಳುವುದಕ್ಕಾಗಿ ಕುಟುಂಬದವರನ್ನೇ ಕಣಕ್ಕಿಳಿಸಿ, ಗೆಲ್ಲಿಸುತ್ತಿದ್ದೇವೆ’ ಎಂದು ದೇವೇಗೌಡರು ಜೆಡಿಎಸ್‌ನ ’ಕುಟುಂಬ ರಾಜಕಾರಣ’ದ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಿದಾಗಲೆಲ್ಲ ಇದೇ ಸೂತ್ರವನ್ನು ಮುಂದಿಟ್ಟುಕೊಂಡು ಜೆಡಿಎಸ್ ಸಮರ್ಥಿಸಿಕೊಂಡಿತ್ತು. ಕುಟುಂಬದ ಹಿರಿಯ ಸೊಸೆ ಭವಾನಿ ರೇವಣ್ಣ ಅವರು ಚುನಾವಣಾ ಅಖಾಡಕ್ಕೆ ಧುಮುಕಿ, ವಿಧಾನಸಭೆ ಪ್ರವೇಶಿಸಲು ಯತ್ನಿಸುತ್ತಿರುವುದು ಜೆಡಿಎಸ್ ಪಕ್ಷದೊಳಗೆ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.
2008ರಲ್ಲಿ ನಡೆದ ಮಧುಗಿರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆಗಿನಿಂದಲೂ ಭವಾನಿ ರೇವಣ್ಣ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಟಿಕೆಟ್ ಪಡೆಯಲು ಹಲವು ಬಾರಿ ಪ್ರಯತ್ನಿಸಿದ್ದಾರೆ. 2013ರಲ್ಲಿ ಕೆ.ಆರ್. ನಗರ ಕ್ಷೇತ್ರದಿಂದ 2016ರಲ್ಲಿ ವಿಧಾನ ಪರಿಷತ್ ಚುನಾವಣೆ, 2018ರ ವಿಧಾನಸಭಾ ಕ್ಷೇತ್ರದಲ್ಲಿ ಬೇಲೂರು ಅಥವಾ ಕೆ.ಆರ್. ನಗರ ಕ್ಷೇತ್ರದಿಂದ, 2021ರಲ್ಲಿ ವಿಧಾನ ಪರಿಷತ್‌ನ ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೂರು ಬಾರಿಯೂ ಕುಟುಂಬದವರ ಮನವೊಲಿಸಿ ಟಿಕೆಟ್ ಪಡೆಯಲು ವಿಫಲವಾಗಿರುವ ಭವಾನಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಷ್ಟೇ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು.
ಈ ಬಾರಿ ಚುನಾವಣಾ ಕಣಕ್ಕಿಳಿಯುವ ಉಮೇದಿನಿಂದ ಹಿಂದೆ ಸರಿಯುತ್ತಿಲ್ಲ. ಈಗ ಮತ್ತೆ ಭವಾನಿ ಸ್ಪರ್ಧೆ ಕುಟುಂಬದೊಳಗೆ ಕಗ್ಗಂಟಾಗಿದೆ. ಕುಟುಂಬ ಮತ್ತು ಪಕ್ಷದ ವರಿಷ್ಠ ದೇವೇಗೌಡರೇ ಖುದ್ದಾಗಿ ಅಖಾಡಕ್ಕಿಳಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಇದೇ ಮೊದಲ ಬಾರಿಗೆ ರೇವಣ್ಣ ಅವರು ತಮ್ಮ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಅಸಹನೆ ಹೊರಹಾಕುವ ಹಂತ ತಲುಪಿದ್ದಾರೆ. ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್, ತಾಯಿಗೆ ಹಾಸನ ಕ್ಷೇತ್ರದಲ್ಲಿ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಮ್ಮನಿಗೆ ಟಿಕೆಟ್ ನೀಡದೇ ಇದ್ದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಪ್ರಜ್ವಲ್ ಹಾಕಿದ್ದಾರೆ.
ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಮಗ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ನೀಡುವ ಕುಮಾರಸ್ವಾಮಿ ಅವರ ಪ್ರಸ್ತಾವವನ್ನು ರೇವಣ್ಣ ಅವರ ಇಡೀ ಕುಟುಂಬ ಒಟ್ಟಾಗಿ ವಿರೋಧಿಸುತ್ತಿದೆ. ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಕುಟುಂಬದೊಳಗೆ ಎದ್ದಿರುವ ಭಿನ್ನಮತದಿಂದ ಎರಡನೇ ಪಟ್ಟಿ ಪ್ರಕಟಣೆಗೆ ಮುಂದಡಿ ಇಡಲಾಗದ ಇಕ್ಕಟ್ಟಿಗೆ ಸಿಲುಕಿದೆ.
ಲೋಕಸಭೆ ಚುನಾವಣೆಯಲ್ಲೂ ಕುಟುಂಬ ವಿವಾದ
2019ರ ಲೋಕಸಭೆ ಚುನಾವಣೆ ವೇಳೆ ಗೌಡರ ಕುಟುಂಬ ಇಂತಹುದೇ ಸಂದಿಗ್ಧತೆಗೆ ಸಿಲುಕಿತ್ತು. ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡಬೇಕು ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿತ್ತು. ಅದೇ ಹೊತ್ತಿನೊಳಗೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ವಾದ ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಕುಟುಂಬದಲ್ಲಿ ಪ್ರಬಲವಾಗಿತ್ತು. ಅಕ್ಕಪಕ್ಕದ ಕ್ಷೇತ್ರದಲ್ಲಿ ಮೊಮ್ಮಕ್ಕಳೇ ನಿಂತಿದ್ದರಿಂದಾಗಿ, ಅನಿವಾರ್ಯವಾಗಿ ದೇವೇಗೌಡರು ತುಮಕೂರು ಆರಿಸಿಕೊಂಡಿದ್ದರು. ಕುಟುಂಬ ರಾಜಕಾರಣ ವಿವಾದಕ್ಕೆ ಎರವಾಗಿ, ದೇವೇಗೌಡರು ಹಾಗೂ ನಿಖಿಲ್ ಇಬ್ಬರೂ ಸೋತಿದ್ದರು.