ಹಾಸನ: ಜೆಡಿಎಸ್ ಪಕ್ಷದಿಂದ ಎಲ್ಲಾ ಸಮುದಾಯದ ಜನರಿಗೆ ಪ್ರಾಧ್ಯಾನತೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಸ್ವರೂಪ್ ಪ್ರಕಾಶ್ ಈ ಬಾರಿಯ ಚುನಾವಣೆಯಲ್ಲಿ 15,000 ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವೀರಶೈವ ಸಮಾಜ ಹಾಗೂ ಜೆಡಿಎಸ್ ಮುಖಂಡ ಸಂಗಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಿಂದ ವೀರಶೈವ ಲಿಂಗಾಯಿತ ಸಮುದಾಯದ ಇಬ್ಬರು ಅಭ್ಯರ್ಥಿಗಳು ಅರಸೀಕೆರೆ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಇತರೆ ರಾಷ್ಟ್ರೀಯ ಪಕ್ಷಗಳು ನಮ್ಮ ಸಮುದಾಯದವರಿಗೆ ಪ್ರಾಧ್ಯಾನತೆ ನೀಡಿಲ್ಲ ಎಂದು ದೂರಿದರು.
ಜೆಡಿಎಸ್ ಬಡವರಿಗೆ, ದೀನ-ದಲಿತರಿಗೆ ಉತ್ತಮ ಯೋಜನೆಗಳನ್ನು ಜಾರಿ ಮಾಡಿದ್ದು, ಮೀಸಲಾತಿಯಲ್ಲಿ ಅನ್ಯಾಯ ಮಾಡದೆ ಅಲ್ಪಸಂಖ್ಯಾತರ ಉದ್ದಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರ್ಯಕ್ರಮಗಳನ್ನು ಪರಿಚಯಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಭಯದ ವಾತಾವರಣ ಇದ್ದು, ಸ್ವರೂಪ್ ಪ್ರಕಾಶ್ ಅವರು ಸರಳ ವ್ಯಕ್ತಿತ್ವದ ಜನನಾಯಕರಾಗಿದ್ದಾರೆ. ಇಂತಹ ವ್ಯಕ್ತಿತ್ವದ ಅಭ್ಯರ್ಥಿಗೆ ಮತ ನೀಡುವ ಮೂಲಕ ಜೆಡಿಎಸ್ ಗೆಲ್ಲಲು ಸಹಕರಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯರಾಮ್, ರಘು ಹೊಂಗೆರೆ, ಸಮೀರ್, ಗೋಪಾಲ್, ಶ್ರೇಯಸ್ ಇದ್ದರು.