ಹಾಸನ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ ಕಳೆದ ಕೆಲ ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಾ ರಾಜಕೀಯ ನಡೆ ಪ್ರದರ್ಶಿಸುತ್ತಿದ್ದಾರೆ. ಸ್ವತಃ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರರಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರುಗಳೊಂದಿಗೆ ಕಳೆದೆರಡು ಮೂರು ದಿನಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ಹಾಸನದ ಸಂಸದರ ನಿವಾಸದಲ್ಲಿ ಕರೆದಿದ್ದ ಜೆಡಿಎಸ್ ಕಾರ್ಯಕರ್ತರುಗಳಿಗೆ ತಾವು ಅಥವಾ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಎಂದು ರೇವಣ್ಣ ಘೋಷಿಸಿದ್ದಾರೆ. ಅದರಂತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹಲವು ಮುಖಂಡರ ಮನೆಗಳಿಗೆ ಮತ್ತು ತಮ್ಮ ಆಪ್ತವಾಗಿ ಬರೆಯುವ ಕೆಲ ಜಿಲ್ಲಾ ಮಟ್ಟದ ಪತ್ರಿಕೆಗಳ ಪ್ರಕಾಶಕರ ಮನೆಗಳಿಗೆ ರೇವಣ್ಣ ಭೇಟಿ ನೀಡಿ ಕುಶಲೋಪಹಾರಿ ನಡೆಸುತ್ತಾ, ಸಲಹೆ, ಸೂಚನೆ ಪಡೆಯುತ್ತಿದ್ದಾರೆ.
ಇನ್ನು ಸ್ವತಃ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜಿ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರುಗಳು ಕುಟುಂಬ ಸಮೇತ ಹಾಸನ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಾ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಮತ್ತೊಂದೆಡೆ ಹಾಸನ ವಿಧಾನಸಭಾ ಕ್ಷೇತ್ರದ ಪ್ರಭಲ ಸ್ಪರ್ಧಿ ಎಂದೇ ಬಿಂಬಿತವಾಗಿರುವ ಸ್ವರೂಪ್ ಪ್ರಕಾಶ್ ಕೂಡ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಮುನ್ನಡೆಸುತ್ತಿದ್ದಾರೆ.
ಈ ನಡೆ ಜೆಡಿಎಸ್‌ನೊಳಗೆ ಬಿರುಸಿನ ಬಿಸಿ ವಾತಾವರಣ ನಿರ್ಮಾಣ ಮಾಡಿದೆ. ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಎಂದೇ ಪ್ರಚಾರಕ್ಕಿಳಿದಿರುವ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ ಪುತ್ರ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸ್ವರೂಪ್ ಅವರನ್ನು ರೇವಣ್ಣ ಮತ್ತವರ ಬೆಂಬಲಿಗರು ಈಗಾಗಲೇ ಮೂಲೆಗುಂಪು ಮಾಡಿದ್ದಾರೆ. ಸ್ವರೂಪ್ ಪ್ರಕಾಶ್ ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ನ ಪ್ರಭಲ ಆಕಾಂಕ್ಷಿ ಎಂದು ಹೇಳಿಕೊಂಡ ಬಳಿಕ ಸ್ವರೂಪ್ ಜೊತೆಗಿದ್ದ ಹಲವಾರು ಬೆಂಬಲಿಗರನ್ನು ಸೈಲೆಂಟಾಗಿ ರೇವಣ್ಣ ಮತ್ತು ಫ್ಯಾಮಿಲಿ ತಮ್ಮತ್ತ ಸೆಳೆದುಕೊಂಡಿದೆ. ಸ್ವತಃ ಸ್ವರೂಪ್ ಅವರನ್ನು ದೂರವಿರಿಸಿರುವ ರೇವಣ್ಣ ಮತ್ತು ಫ್ಯಾಮಿಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಾವೇ ನಿರ್ಣಾಯಕ ಎಂಬುದನ್ನು ಸಾಬೀತು ಪಡಿಸಿದೆ. ಆದರೂ ಪಟ್ಟು ಬಿಡದ ಸ್ವರೂಪ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲಿನ ಭರವಸೆ ಮತ್ತು ಕೃಪೆ ಪಡೆದು ಕೊಂಡಂತೆ ಕಂಡು ಬರುತ್ತಿದ್ದು ರೇವಣ್ಣ ಅವರ ಫ್ಯಾಮಿಲಿಗೆ ಸೆಡ್ಡು ಹೊಡೆದು ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ತರಲು ಮುಂದಾಗಿರುವುದು ಮಾತ್ರ ಜೆಡಿಎಸ್ ಪಾಳಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಅಚ್ಚರಿಗೆ ಕಾರಣವಾಗಿದೆ.
ಅಂತಹ ಸ್ವೌಮ್ಯ ಸ್ವರೂಪ ಹೀಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಸೆಡ್ಡು ಹೊಡೆದು ಟಿಕೆಟ್ ತರಲು ಮುಂದಾಗಿರುವುದು, ಅದಕ್ಕೆ ಪೂರಕವಾಗಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಿರುವುದು, ಹೆಚ್.ಡಿ. ರೇವಣ್ಣ ಕುಟುಂಬಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ಸವಾಲಾಗಿ ಪರಿಣಮಿಸಿದೆ. ಸ್ವರೂಪ್ ಪ್ರಕಾಶ್ ನಡೆ ಕೆಲವರಿಗೆ ಅಚ್ಚರಿ ಮೂಡಿಸಿದ್ದರೆ ರೇವಣ್ಣ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ರೇವಣ್ಣ ಅವರ ಕುಟುಂಬದ ಆಪ್ತರಿಗೆ ಮಾತ್ರ ಅಸಹನೀಯವೆನಿಸಿದೆ.