ಹಾಸನ: ಕಟ್ಟಾಯ ಹೋಬಳಿ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಚಕಾರವೆತ್ತದ ಕಾಂಗ್ರೆಸ್ ಪಕ್ಷದವರು ಇಂದು ಚುನಾವಣೆ ಗಿಮಿಕ್ ರೀತಿಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ಮುಖಂಡ ಕಾರ್ಲೆ ಇಂದ್ರೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಕಾರಣಕ್ಕೆ ಸಕಲೇಶಪುರ ವಿಧಾನ ಸಭಾ ಕ್ಷೇತ್ರಕ್ಕೆ ಕಟ್ಟಾಯ ಹೋಬಳಿಯನ್ನು ಸೇರಿಸಲಾಗಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ ಸುರೇಶ ಅವರು ಆರೋಪಿಸಿರುವುದು ಹಾಸ್ಯಸ್ಪದವಾಗಿದೆ ಎಂದರು.
ಕಟ್ಟಾಯ ಹೋಬಳಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸೇರ್ಪಡೆ ಕುರಿತಂತೆ 15 ವರ್ಷಗಳ ಹಿಂದೆ ಕುಲದೀಪ್ ಸಿಂಗ್ ಆಯೋಗ ಅಭಿಪ್ರಾಯವನ್ನು ಸಂಗ್ರಹಿಸುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನಗಳ ಕಾಲ ಪ್ರತಿಭಟನೆಯನ್ನು ನಡೆಸಿ ಕಟ್ಟಾಯ ಹೋಬಳಿಯನ್ನು ಹಾಸನ ಅಥವಾ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಉಳಿಸುವಂತೆ ಮನವಿಯನ್ನು ಮಾಡಲಾಗಿತ್ತು ಆದರೆ ಕಾಂಗ್ರೆಸ್ ಪಕ್ಷ ಅಂದು ಯಾವುದೇ ಮನವಿಯನ್ನು ಆಯೋಗಕ್ಕೆ ನೀಡಿರಲಿಲ್ಲ ಆದರೆ ಇಂದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಕೆ ಸುರೇಶ ಗಿಮಿಕ್ ರಾಜಕೀಯ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕಟ್ಟಾಯ ಹೋಬಳಿಯಲ್ಲಿ 16,ooo ಮತ ಬಂದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೇವಲ 3,000 ಮತ ಬಂದಿದೆ. ಹೀಗಿರುವಾಗ ಕೇವಲ ರಾಜಕೀಯಕ್ಕೋಸ್ಕರ ಹೇಳಿಕೆಯನ್ನು ನೀಡುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು ಎಂದರು. ಸಕಲೇಶಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಶಾಸಕ ಹೆಚ್. ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಅಭಿವೃದ್ಧಿಯನ್ನು ಹೊಂದಿದ್ದು, 350 ಕೋಟಿ ಅನುದಾನದಡಿ ಅಭಿವೃದ್ಧಿಯು ಕಾಮಗಾರಿಗಳು ಪ್ರಗತಿಯಲ್ಲಿದೆ. 80 ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡಲಾಗಿದೆ.ಕಾಂಗ್ರೆಸ್ ಮುಖಂಡರು ಇಂತಹ ಹೇಳಿಕೆಯನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಇಂದ್ರೇಶ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಕಾಂತರಾಜು, ಶಿವಣ್ಣ, ರಂಗಶೆಟ್ಟಿ, ನಿಂಗರಾಜು ಇದ್ದರು.