ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವಾಭಿಮಾನದ ಪರ ಹೋರಾಟ ನಡೆಯುತ್ತಿದ್ದು, ಕ್ಷೇತ್ರದ ಜನ ಹಣದ ಆಮಿಷಕ್ಕೆ ಒಳಗಾಗದೆ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ನಗರದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಅವರು ಶ್ರಮಿಸಿದ್ದಾರೆ ಕೇವಲ ಸಣ್ಣ ಪುಟ್ಟ ಕೆಲಸವನ್ನು ಮಾಡದೆ ಆರೋಗ್ಯ ಮತ್ತು ಶೈಕ್ಷಣಿಕ ದೃಷ್ಟಿಯಿಂದ ದೊಡ್ಡ ಮಟ್ಟದ ಅಭಿವೃದ್ಧಿ ಜೆಡಿಎಸ್ ನಿಂದ ಆಗಿದ್ದು, ನೂತನ ನ್ಯಾಯಾಲಯ ಕಟ್ಟಡ, ಬಸ್ ನಿಲ್ದಾಣ, ಕೆಐಎಡಿಬಿ ಸೇರಿದಂತೆ ಹತ್ತಾರು ಆಸ್ಪತ್ರೆ, ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಈ ಎಲ್ಲಾ ವಿಚಾರಗಳು ಪಕ್ಷದ ಗೆಲುವಿಗೆ ಸಹಕಾರಿಯಾಗಿದೆ ಎಂದರು.
ಈ ಹಿಂದೆಯೂ ಕೂಡ ಕ್ಷೇತ್ರದಲ್ಲಿ ರಾಜೇಗೌಡರು, ಹನುಮೇಗೌಡರು ಸೇರಿದಂತೆ ಅನೇಕ ನಾಯಕರು ಹಣ ಬಲವಿಲ್ಲದೆ ಗೆದ್ದಿದ್ದಾರೆ, ನಮ್ಮ ತಂದೆಯು ಕೂಡ ನಾಲ್ಕು ಬಾರಿ ಶಾಸಕರಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಾರ್ವಜನಿಕರ ಸೇವೆಯನ್ನು ಮಾಡಿದ್ದು, ಈ ಬಾರಿ ಹಾಸನದಲ್ಲಿ ಸ್ವಾಭಿಮಾನಿ ಮತದಾರರು ನನಗೆ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ನಾನು ಗೆದ್ದ ಮೇಲೆ ಗುಲಾಮಗಿರಿ ಪದ್ಧತಿ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಪಕ್ಷದ ಹಿರಿಯರ ಮಾರ್ಗದರ್ಶನ ಕೇಳುವುದು ಸಾಮಾನ್ಯ, ಅದರಂತೆ ದೇವೇಗೌಡರು, ಎಚ್‌ಡಿ ರೇವಣ್ಣ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಸ್ವರೂಪ್ ಸ್ಪಷ್ಟಪಡಿಸಿದರು.
ಸ್ವರೂಪ್ ಅವರ ತಾಯಿ ಲಲಿತಮ್ಮ ಅವರು ಮಾತನಾಡಿ ನಾಲ್ಕು ಬಾರಿ ನನ್ನ ಪತಿ ಪ್ರಕಾಶ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾಗ ಇದ್ದಂತಹ ಸನ್ನಿವೇಶವೇ ಈಗ ಇಲ್ಲ. ಇಂದು ಹಣದ ಆಮಿಷಕ್ಕೆ ಮತದಾರರನ್ನು ಸೆಳೆಯಲಾಗುತ್ತಿದೆ, ಈ ಬಾರಿಯ ಚುನಾವಣೆಯಲ್ಲಿ ಮಗನಾದ ಸ್ವರೂಪ್ ಅವರಿಗೆ ಹೆಚ್ಚು ಮತವನ್ನು ನೀಡುವ ಮೂಲಕ ಜಯಶಾಲಿಯನ್ನಾಗಿ ಮಾಡಬೇಕು. 90ರ ವಯಸ್ಸಿನಲ್ಲೂ ಹೋರಾಟದ ಹಾದಿ ಹಿಡಿದಿರುವ ದೇವೇಗೌಡರ ಮೇ 18ರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡೋಣ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗಮ್, ಗೋಪಾಲ್, ಸ್ವಾಮಿ ಗೌಡ ಇದ್ದರು.