ಹಾಸನ: ಸ್ಥಳೀಯ ಶಾಸಕ ಪ್ರೀತಮ್ ಗೌಡ ಅವರು ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮಹಿಳಾ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಅಗಿಲೆ ಯೋಗೇಶ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು ಹಲವು ದಿನದಿಂದ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿವರ್ತನಾ ಟ್ರಸ್ಟ್ ಹೆಸರಿನಲ್ಲಿ ನೂರಾರು ಮಹಿಳೆಯರನ್ನು ಸೇರಿಸಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಬೆಳ್ಳಿಯ ಸಾಮಗ್ರಿಯನ್ನು ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಚುನಾವಣಾ ಅಧಿಕಾರಿ ಅವರಿಗೂ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಶಾಸಕರೊಂದಿಗೆ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುವ ಮೂಲಕ ಪ್ರೀತಮ್ ಗೌಡ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸುವಂತೆಯೂ ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನವಾಗಿದ್ದು ಶಾಸಕರ ಪ್ರಜಾಪ್ರಭುತ್ವ ವಿರುದ್ಧದ ನಡೆ ಸರಿಯಲ್ಲ ಎಂದರು.
ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಮುಂದಿನ ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ಮಾಡುತ್ತಿದ್ದು, ಚುನಾವಣಾ ಪೂರ್ವ ಮಹಿಳೆಯರಿಗೆ ಆಮಿಷ ಒಡ್ಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಹಾಗೂ ಸಂಘ ಪರಿವಾರದ ಘನತೆಗೂ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಶಾಸಕರ ಇಂತಹ ಕಾರ್ಯಕ್ರಮಗಳು ಮುಂದುವರೆದಲ್ಲಿ ಹಾಗೂ ಅಧಿಕಾರಿಗಳು ಕ್ರಮವಹಿಸದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಲಾಗುವುದು ಎಂದು ಯೋಗೇಶ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ, ಸುಂದರೇಶ ಇದ್ದರು