ಹಾಸನ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಸಾಮಾಜಿಕ ನ್ಯಾಯ ಘಟಕದ ಉದ್ಘಾಟನೆ ಕಾರ್ಯಕ್ರಮ ಮಾ. ೧೯ರಂದು ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ ೧೯ರಂದು ಬೆಳಿಗ್ಗೆ ೧೧.೩೦ಕ್ಕೆ ಸಮಾರಂಭ ಉದ್ಘಾಟನೆಯನ್ನು ಸಾಮಾಜಿಕ ನ್ಯಾಯ ಘಟಕದ ರಾಜ್ಯ ಘಟಕದ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕನಾಥ ನೆರವೇರಿಸಲಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಅಲೆಮಾರಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಹನುಮಂತು, ರಾಜ್ಯ ಸಾಮಾಜಿಕ ನ್ಯಾಯ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ್, ಡಾ. ಗೋವಿಂದರಾಜು, ಮಾಜಿ ಸಚಿವರಾದ ಬಿ.ಶಿವರಾಂ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಕೆ ಜವರೇಗೌಡ, ಬಿ.ಕೆ ರಂಗಸ್ವಾಮಿ, ಹೆಚ್. ಕೆ ಮಹೇಶ್, ಸೇರಿದಂತೆ ಹಲವು ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸುಮಾರು ೨೫ರಿಂದ ೩೦ ಸಮುದಾಯಗಳ ಹೆಸರೇ ಗೊತ್ತಿಲ್ಲ ಆ ಸಮುದಾಯಗಳಿಗೆ ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲಾತಿಗಳು ಇಲ್ಲದೆ ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಇಂತಹ ಜನಾಂಗಗಳನ್ನು ಗುರುತಿಸಿ ಅವರಿಗೆ ಜೀವನ ಸಂಪ್ರದಾಯದ ವೃತ್ತಿ ಸಾಮಾಜಿಕ ನ್ಯಾಯ ಘಟಕದ ಮೂಲಕ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಮಾರಂಭಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಜಾತಿ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬೇಕು ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆ ಸಾಮಾಜಿಕ ನ್ಯಾಯ ಘಟಕದ ಅಧ್ಯಕ್ಷ ಎಂ. ಮಂಜೇಗೌಡ, ಸದಾಶಿವ, ಹೊನ್ನೇಗೌಡ, ಗೋವಿಂದರಾಜು, ಮುಬಾಶೀರ್ ಇದ್ದರು.