ಬೇಲೂರು: ಕೋಮು ಸೌಹಾರ್ದತೆಗೆ ತಾಲೂಕು ಹೆಸರುವಾಸಿಯಾಗಿದ್ದು, ಜಾತಿ ಸಂಘರ್ಷಕ್ಕೆ ಆಸ್ಪದ ನೀಡದೆ ನೂತನ ಶಾಸಕ ಹುಲ್ಲಹಳ್ಳಿ ಸುರೇಶ ಈ ಹಿಂದಿನ ಶಾಸಕರುಗಳಂತೆ ಶಾಂತಿ ಸಂಯಮವನ್ನು ಮೈಗೂಡಿಸಿಕೊಂಡು ನಡೆದರೆ ಕಾಂಗ್ರೆಸ್ ಪಕ್ಷ ಅವರ ಜೊತೆ ಸಹಕರಿಸುವುದಾಗಿ ಮಾಜಿ ರಾಜ್ಯ ಸಫಾಯಿ ಕರ್ಮಚಾರಿ ಮಂಡಳಿ ಅಧ್ಯಕ್ಷ ಎಂ.ಆರ್ ವೆಂಕಟೇಶ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವರಾಮ್ ಅವರು ಅಲ್ಪಮತದ ಅಂತರದಲ್ಲಿ ಸೋಲು ಅನುಭವಿಸಿದ್ದು ಕಾರ್ಯಕರ್ತರುಗಳಿಗೆ ಮಾನಸಿಕವಾಗಿ ನೋವುಂಟು ಮಾಡಿದೆ. ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನ ಕಾರ್ಯಕರ್ತರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡು ದೀನ ದಲಿತರ ಪರವಾಗಿ ಕೆಲಸ ಮಾಡಿದ್ದರು. ರಾಜ್ಯದೆಲ್ಲೆಡೆ ಕಾಂಗ್ರೆಸ್ ಜಯಭೇರಿ ಬಾರಿಸಿ ಬಹುಮತ ಬಂದಿದ್ದರು, ನಮ್ಮ ತಾಲೂಕಿನಲ್ಲಿ ಸೋಲು ಕಂಡಿದ್ದು ಬೇಸರ ತಂದಿದೆ.
ಈ ಬಾರಿ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳಾದ ಎಸ್ ಸಿ, ಎಸ್ ಟಿ, ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ತಾಲೂಕಿನಲ್ಲಿ ಸೌಮ್ಯ ಸ್ವಭಾವದಲ್ಲಿ ಶಾಸಕರುಗಳು ಆಡಳಿತ ನಡೆಸಿದ್ದು, ಅದರಂತೆ ನೂತನ ಶಾಸಕ ಎಚ್. ಕೆ. ಸುರೇಶ್ ರವರು ಯಾವುದೇ ಜಾತಿ, ಸಂಘರ್ಷ, ಗಲಭೆಗೆ ಅವಕಾಶ ನೀಡದೆ ಸೌಹಾರ್ದಿತವಾಗಿ ಆಡಳಿತ ನಡೆಸುವಂತೆ ಕಿವಿಮಾತು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಮಾತನಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವರಾಮ್ ಪರವಾಗಿ ಚುನಾವಣೆಯಲ್ಲಿ ಮನಃಪೂರ್ವಕವಾಗಿ ಕಾರ್ಯನಿರ್ವಹಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಎಲ್ಲರಿಗೂ ಅಭಿನಂದನೆ. ನೂತನ ಶಾಸಕ ಹೆಚ್.ಕೆ ಸುರೇಶ್ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷ ಬಯಸುತ್ತಿದೆ. ರಾಜ್ಯದಲ್ಲಿ ಈಗ ನಮ್ಮದೇ ಸರ್ಕಾರವಿದ್ದು ಅವರಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ತಾವೆಲ್ಲರೂ ಹೊಣೆ ಹೊತ್ತು ಮುಂದಿನ ದಿನಗಳಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವುದಾಗಿ ಹೇಳಿದರು.
ಮಾಜಿ ಜಿ.ಪಂ ಸದಸ್ಯ ತೌಫಿಕ್ ಮಾತನಾಡಿ, ಈ ಚುನಾವಣೆಯಲ್ಲಿ ಸುರೇಶ್ ಕುಟುಂಬದ ಸದಸ್ಯರು ಸೇರಿದಂತೆ ಪ್ರಧಾನ ಮಂತ್ರಿ, ಮೋದಿ ಹಾಗೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ತಾಲೂಕಿಗೆ ಆಗಮಿಸಿದ ಕಾರಣ ಹಾಗೂ ಕಳೆದ ಬಾರಿ ಸೋಲಿನ ಅನುಕಂಪದ ಅಲೆ ಗೆಲುವಿಗೆ ಕಾರಣವಾಗಿದೆ. ತಾವುಗಳು ಸೋತೆವೆಂದು ಕೈಕಟ್ಟಿ ಕೂರದೆ ಲೋಕಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳತ್ತ ಗಮನಹರಿಸುವುದಾಗಿ ಹೇಳಿದರು.
ಪುರಸಭೆ ಸದಸ್ಯ ಜಿ ಶಾಂತಕುಮಾರ್ ಮಾತನಾಡಿ ತಾಲೂಕಿನ ಜೆಡಿಎಸ್ ಪ್ರಾಬಲ್ಯವುಳ್ಳ ಅತಿ ಹೆಚ್ಚಿನ ಭೂತಗಳಲ್ಲಿ ಬಿಜೆಪಿಯ ಮತಗಳು ಬಂದಿದ್ದು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಗುಮಾನಿ ವ್ಯಕ್ತಪಡಿಸಿದರು. ಇದರ ಜೊತೆಗೆ ಕಳೆದ ಬಾರಿ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್ ಮೇಲೆ ಅನುಕಂಪದ ಮತಗಳು ಬಿದ್ದಿವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅನಾರೋಗ್ಯದಿಂದ ಪ್ರಚಾರ ಸಭೆಗೆ ಬರಲಾಗಲಿಲ್ಲ. ಬಿ. ಶಿವರಾಂನವರು ತಾಲೂಕಿನ 1,400 ಹಳ್ಳಿಗಳಿಗೂ ಭೇಟಿ ನೀಡಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ತಾವು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಪರಾವಿಮರ್ಶೆ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಹಾಜರಿದ್ದರು.