ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಹೆಚ್ಚಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಲ್ಲೆ ಅರಸೀಕೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಹಿರಿಯ ಮುಖಂಡ ಜಿ.ಬಿ. ಶಶಿಧರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿ.ಬಿ. ಶಶಿಧರ ಕಳೆದ ಭಾರಿ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಐವತ್ತು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಆಘಾತವಾಗಿದೆ. ಈಚೆಗೆ ನಡೆದ ಸಮಾವೇಶದಲ್ಲಿ ಕೆ.ಎಂ. ಶಿವಲಿಂಗೇಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಈ ಕಾರಣದಿಂದ ತೀವ್ರ ಬೇಸರಗೊಂಡಿರುವ ಶಶಿಧರ್ ಈಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಐದು ವರ್ಷದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ದಿನೇಶ ಗುಂಡೂರಾವ್ ಆನಂತರ ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಅವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆಗೂಡಿ ಅರಸೀಕೆರೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆಗಳು ನನಗೆ ಬೇಸರ ತರಿಸಿದೆ. ನಮಗೆ ಗೆಲ್ಲುವ ಅಭ್ಯರ್ಥಿ ಬೇಕು ಎಂದು ಶಿವಲಿಂಗೇಗೌಡರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿ ಎಂದು ನಾವು ಹೈಕಮಾಂಡ್ ಬಳಿ ಮನವಿ ಮಾಡಿದ್ದೆವು. ಇಲ್ಲ ನಮಗೆ ಗೆಲ್ಲುವ ಅಭ್ಯರ್ಥಿಯೇ ಬೇಕು ಎಂದರು. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದ ಜಿ.ಬಿ. ಶಶಿಧರ ಹೇಳಿದರು. ಆದರೆ, ಅವರು ಮುಂದೆ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.