ಹಾಸನ: ಹಾಸನ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಭವಾನಿ ಅವರಿಗೆ ಟಿಕೆಟ್ ಕೊಡದಿದ್ದರೆ ಹಾಸನದಲ್ಲಿ ಮತ್ತು ಹೊಳೆನರಸೀಪುರದಲ್ಲಿ ಇಬ್ಬರೂ ಬಂಡಾಯವಾಗಿ ಸ್ಪರ್ಧೆಗೆ ಇಳಿಯಲಾಗುವುದು ಎಂದು ಹೆಚ್.ಡಿ.ರೇವಣ್ಣ, ಮಾಜಿ ಸಿ.ಎಂ.ಕುಮಾರಸ್ವಾಮಿಗೆ ಪರೋಕ್ಷ ಎಚ್ಚರಿಕೆ ನೀಡುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.
ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪುತ್ತಿಲ್ಲ. ಇದರಿಂದ ಹಾಸನದ ಟಿಕೆಟ್ ವಿಚಾರದಲ್ಲಿ ದೊಡ್ಡಗೌಡರ ಕುಟುಂಬದಲ್ಲಿ ದೊಡ್ಡ ಬಿಕ್ಕಟು ಶುರವಾಗಿದ್ದು, ಇದೀಗ ಭವಾನಿಗೆ ಟಿಕೆಟ್ ಕೊಡದಿದ್ದರೆ ಹೊಳೆನರಸೀಪುರದಲ್ಲಿ ತಾವು ಹಾಗೂ ಹಾಸನದಿಂದ ಭವಾನಿ ಬಂಡಾಯವಾಗಿ ನಿಲ್ಲುವ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಆಪ್ತರು ಹಾಗೂ ಕುಟುಂಬ ಸದಸ್ಯರ ಮೂಲಕ ಗೌಡರಿಗೆ ರೇವಣ್ಣ ತಮ್ಮ ನಿಲುವು ತಿಳಿಸಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕುಮಾರಸ್ವಾಮಿ ಛಲ ಬಿಡದ ನಿಲುವಿನ ನಡುವೆ ಕೂಡ ಹಾಸನ ಟಿಕೆಟ್ ಪಡೆಯಲು ತಂತ್ರ ಹೆಣೆಯಲಾಗುತ್ತಿದ್ದು, ಪತ್ನಿಗೆ ಟಿಕೆಟ್ ಕೊಡದಿದ್ದರೆ ತಮಗೂ ಬೇಡ ಎಂದು ವಾರ್ನಿಂಗ್ ನೀಡಿದ್ದರಲ್ಲದೇ, ಹಾಸನ- ಹೊಳೆನರಸೀಪುರದಲ್ಲಿ ಬಂಡಾಯ ನಿಲ್ಲಲಾಗುವುದು, ಬೇರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲ್ಲ ಎನ್ನುವ ಸಂದೇಶ ನೀಡಿದರಂತೆ, ಇನ್ನೂ ಈ ಬಗ್ಗೆ ನಿನ್ನೆ ಹಾಸನ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ತಮ್ಮ ಆಪ್ತರೊಟ್ಟಿಗೆ ಇದೇ ವಿಚಾರವಾಗಿ ರೇವಣ್ಣ ಚರ್ಚೆ ನಡೆಸಿದ್ದು, ಬಂಡಾಯ ಅಭ್ಯರ್ಥಿಯನ್ನಾಗಿ ಭವಾನಿ ರೇವಣ್ಣ ಅವರನ್ನು ನಿಲ್ಲಿಸಿದ್ದೆಯಾದಲ್ಲಿ ನಾವೆಲ್ಲ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆಂದು ಭರವಸೆ ನೀಡಿದ್ದಾರೆನ್ನಲಾಗುತ್ತಿದ್ದು, ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಕುಮಾರಸ್ವಾಮಿ ಮಾತ್ರ ತಮ್ಮ ಪಟ್ಟನ್ನು ಸಡಿಲಿಸುತ್ತಿಲ್ಲ. ಹಾಸನದಿಂದ ಸ್ವರೂಪ್‌ಗೆ ಟಿಕೇಟ್ ಎಂಬುದನ್ನು ಇಂದೂ ಸಹಾ ಯಶವಂತಪುರದ ಪಂಚರತ್ನ ಯಾತ್ರೆಯಲ್ಲಿ ಪುನರುಚ್ಚಸಿದ್ದಾರೆ. ಒಟ್ಟಿನಲ್ಲಿ ಹಾಸನ ಟಿಕೇಟ್ ಕಗ್ಗಂಟು ದೇವೇಗೌಡರ ಕುಟುಂಬಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.