ಹಾಸನ: ಯಾವ ಭ್ರಷ್ಟ ರಾಜಕೀಯ ಪಕ್ಷಗಳಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಮ್ ಆದ್ಮಿ ಪಕ್ಷದ ವತಿಯಿಂದ ಕರಪತ್ರ ಹಂಚಿ, ಮಜ್ಜಿಗೆ ನೀಡಲಾಗುತ್ತಿದೆ ಎಂದು ಎಎಪಿ ಮುಖಂಡ ಅಗಿಲೆ ಯೋಗೀಶ್ ತಿಳಿಸಿದರು.
ನಗರದ ಹೇಮಾವತಿ ಪ್ರತಿಮೆ ಮುಂಬಾಗದಿಂದ ಹೊರಟ ಎಎಪಿ ಪಾರ್ಟಿ ಮೆರವಣಿಗೆಯು ನಗರದಲ್ಲಿ ಪಾದಯಾತ್ರೆ ಮೂಲಕ ಸುತ್ತಾಟ ನಡೆಸಿದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭ್ರಷ್ಟ ರಾಜಕೀಯ ಪಕ್ಷಗಳಿಗೆ ಯಾರು ಕೂಡ ಮತ ನೀಡಬೇಡಿ. ನಿಮ್ಮ ತೆರಿಗೆ ಹಣವನ್ನು ನಿಮ್ಮ ಸೇವೆಗಾಗಿಯೇ ವೆಚ್ಚ ಮಾಡುವ ಅಮ್ ಆದ್ಮಿ ಪಕ್ಷಕ್ಕೆ ಮತ ನೀಡಿ. ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದಾಗ ನಿಮಗೆ ಆಮಿಷಗಳನ್ನು ನೀಡಬಹುದು. ಬೆಳ್ಳಿ, ಚಿನ್ನ, ಸೀರೆ ಸೇರಿದಂತೆ ಎಲ್ಲಾವನ್ನು ಕೊಡುವ ಮೂಲಕ ಮತಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಲಕ್ಷ್ಮೀ ಪೂಜೆ ಹೆಸರಿನಲ್ಲಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಭ್ರಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮತದಾರರಿಗೆ ತಿಳಿಸಲು ಒಂದು ಕರಪತ್ರ ಹಾಗೂ ತಂಪಾದ ಮಜ್ಜಿಗೆ ಕೊಡಲಾಗುತ್ತಿದೆ. ಮತ ಎಂದರೇ ಮತದಾನ ಆಗಬೇಕು. ಮಾರಾಟವಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಇಡೀ ಜನರಿಗೆ ಪ್ರತಿ ಮನೆಗೂ ಉಚಿತ ನಿವೇಶನ ಸಿಗಬೇಕು. ಪ್ರತಿ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂ ಮಾಶಾಸನ ಸಿಗಬೇಕು. ಉಚಿತ ಸಾರಿಗೆ ವ್ಯವಸ್ಥೆ ಬರಬೇಕು. ಎಲ್ಲಾರ ಮನೆಯಲ್ಲೂ ಉಚಿತ ವಿದ್ಯುತ್ ಆಗಬೇಕು. ಶಿಕ್ಷಣ, ಆರೋಗ್ಯ ಎಲ್ಲಾವು ಉಚಿತ ಸಿಗಬೇಕು. ದೆಹಲಿ ಮಾದರಿಯ ಸರಕಾರ ಹಾಸನದಲ್ಲಿ ವ್ಯಾಪಿಸಬೇಕು ಎಂದರು. ಮತದಾರರು ಪೊರಕೆಗೆ ಮತ ಹಾಕುವುದರ ಮೂಲಕ ಎಲ್ಲಾದಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಎಎಪಿ ಜಿಲ್ಲಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ದಸ್ತಗೀರ, ಸಂಘಟನ ಕಾರ್ಯದರ್ಶಿ ಸುಂದರೇಶ, ಅಬೀಬ್, ನಗರಾಧ್ಯಕ್ಷ ನಜೀರ್ ಅಹಮದ್, ಗ್ರಾಮಾ ಪಂಚಾಯಿತಿ ಸದಸ್ಯ ಮಂಜಣ್ಣ, ಕುಮಾರ, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಶಹನಾಜ್, ಇತರರು ಉಪಸ್ಥಿತರಿದ್ದರು.