ಬೇಲೂರು: ಪೊಲೀಸ್ ಠಾಣೆಯಲ್ಲಿ ರಾಜಕಾರಣ ಮಾಡೋರಿಗೆ ನಾನು ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಉತ್ತರ ಕೊಡಬೇಕಾ ಎಂದು ಶಾಸಕ ಕೆ.ಎಸ್ ಲಿಂಗೇಶ್ ಕಿಡಿ ಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೨೦೧೮ರಂದು ಶಾಸಕನಾದ ದಿನದಿಂದ ನಾನೊಬ್ಬ ರೈತನ ಮಗನಾಗಿ ಪ್ರಾಮಾಣಿಕವಾಗಿ ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಒತ್ತಾಯದ ಮೇರೆಗೆ ೧೮೦೦ ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿಯ ವಿರೋಧ ಪಕ್ಷದ ಮುಖಂಡರು ವಿಧಾನಸೌಧದ ಒಂದೊಂದು ಕಂಬವನ್ನು ಹೋಗಿ ಕೇಳಲಿ ಅದನ್ನು ಬಿಟ್ಟು ನನ್ನನ್ನು ನಿತ್ಯ ದೂರುವುದು ಅವರ ಹವ್ಯಾಸವಾಗಿದೆ.
ಇವರಿಗೆ ನಾನು ಉತ್ತರ ನೀಡಲು ಸಿದ್ಧವಿಲ್ಲ ನನ್ನ ಮತದಾರರಿಗೆ ತಲೆಬಾಗುತ್ತೇನೆ. ಬಿಜೆಪಿಯವರು ಎತ್ತಿನಹೊಳೆ ನಮ್ಮ ಕೊಡುಗೆ ಎನ್ನುತ್ತಾರೆ. ಇಲ್ಲಿನ ಬಿಜೆಪಿ ಮುಖಂಡರು ಬೇಲೂರಿನ ಅಭಿವೃದ್ಧಿಗೆ ಅವರದ್ದೇ ಸರ್ಕಾರದಲ್ಲಿ ಒಂದು ರೂಪಾಯಿ ತಂದಿದ್ದಾರಾ ಎಂದು ಸವಾಲು ಹಾಕಿದ ಅವರು ಎಚ್. ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ಎತ್ತಿನಹೊಳೆ ಏತ ನೀರಾವರಿ ಯೋಜನೆಗೆ ೧೦೦ ಕೋಟಿ ಇಟ್ಟಿದ್ದರು.
ಅವಕಾಶ ತಪ್ಪಿ ಸರ್ಕಾರ ಹೋದ ನಂತರದಲ್ಲಿ ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ೧೨೮ ಕೋಟಿ ಬಿಡುಗಡೆ ಹಣದಿಂದ ಕಾಮಗಾರಿ ನಡೆಯುತ್ತಿರುವುದು ನನ್ನ ಕನಸಿನ ಕೂಸಾಗಿದೆ. ಅದಲ್ಲದೆ ರಣಘಟ್ಟ ಯೋಜನೆ ಸೇರಿದಂತೆ ನೀರಾವರಿ, ಸಣ್ಣ ನೀರಾವರಿ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಎಂಡಿಆರ್, ಇಲಾಖೆಗಳ ಯೋಜನೆಯ ಅಡಿ ೧೮೦೦ ಕೋಟಿಗೊ ಅಧಿಕ ಅನುದಾನ ತರುವ ಮೂಲಕ ಸಿ ಸಿ ರಸ್ತೆಗಳು, ಅಂಬೇಡ್ಕರ್ ಭವನ, ಅಂಬೇಡ್ಕರ್ ವಸತಿ ನಿಲಯಗಳು ಅಭಿವೃದ್ಧಿಪಡಿಸಿದ್ದೇನೆ.
ನನ್ನ ಕೆಲಸ ನನಗೆ ತೃಪ್ತಿ ತಂದಿದೆ ಕೆಲವು ನಿರಾಸೆ ಆಗಿದೆ. ಹೆಬ್ಬಾಳು ಏತಾ ನೀರಾವರಿ ಕನಸು ಸಹ ಕಟ್ಟಿದ್ದೇನೆ. ಇದಕ್ಕೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಜನ ನನಗೆ ಆಶೀರ್ವದಿಸುವ ನಂಬಿಕೆ ಇದೆ. ಅವರ ನಂಬಿಕೆಯಂತೆ ಉಳಿದಂತ ಸಮಗ್ರ ನೀರಾವರಿ, ಗ್ರಾಮೀಣ ಪ್ರದೇಶದ ಜಮೀನಿಗೂ ತೆರಳುವ ರಸ್ತೆ, ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳ ನಿರ್ಮಾಣ, ರೈತರಿಗೆ ನಿರಂತರ ವಿದ್ಯುತ್ ಒದಗಿಸುವ ಪ್ರಯತ್ನ, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಉದ್ಯಮಿಗಳ ಹೂಡಿಕೆ ಸೇರಿದಂತೆ ಕೆಪಿಎಸ್ ಶಾಲೆಗಳು, ಆರೋಗ್ಯ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರವಾಸಿ ಕೇಂದ್ರವಾದ ಬೇಲೂರಿನ ಮುಖ್ಯ ರಸ್ತೆ ಅಗಲೀಕರಣ, ಪ್ರವಾಸಿಗರಿಗೆ ಹೈಟೆಕ್ ಬೃಂದಾವನ, ಸೇರಿದಂತೆ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ತೋಚ ಅನಂತ ಸುಬ್ಬರಾಯ, ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಚ್. ಮಹೇಶ, ಮುಖಂಡರಾದ ಸಂತೋಷ ಇದ್ದರು.