ಹಾಸನ: ಭಾರತೀಯ ಜನತಾ ಪಾರ್ಟಿ ಎಸ್‌ಸಿ ಮೋರ್ಚಾ ವತಿಯಿಂದ ಅರಕಲಗೂಡಿನಲ್ಲಿ ನಡೆದ ಬಿಜೆಪಿ ದಲಿತ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಎಸ್‌ಸಿ ಮೋರ್ಚ ಜಿಲ್ಲೆ ಘಟಕದ ಅಧ್ಯಕ್ಷ ಎಸ್.ಡಿ ಚಂದ್ರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರಕಲಗೂಡಿನಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ನಾಲ್ಕುವರೆ ಸಾವಿರಕ್ಕೂ ಹೆಚ್ಚು ದಲಿತ ಸಮುದಾಯದ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ಇಂತಹ ಬೆಳವಣಿಗೆ ಈ ಬಾರಿಯೂ ಕೂಡ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮುನ್ಸೂಚನೆಯಾಗಿದ್ದು, ಬಿಜೆಪಿಯತ್ತ ದಲಿತ ಸಮುದಾಯ ಒಲವು ತೋರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಜನಸ್ನೇಹಿ ದಲಿತ ಪರ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುವ ಸಮೂಹ, ವಿದ್ಯಾವಂತ ವರ್ಗದವರು ಪಕ್ಷದ ಯಶಸ್ವಿ ಯೋಜನೆಗಳನ್ನು ನೋಡಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಅರಕಲಗೂಡು ಮತ್ತು ಅರಸೀಕೆರೆ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು ಅಂತೆಯೇ ಅರಕಲಗೂಡಿನಲ್ಲಿ ನಡೆದಂತಹ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಮ್ಮ ಸಮುದಾಯವು ಸಹಕಾರ ಮಾಡಲಿದೆ ಎಂಬ ಆಶಾಭಾವನೆ ಮೂಡುತ್ತದೆ ಎಂದು ನುಡಿದರು.
ಪ್ರಜ್ಞಾವಂತರಾಗಿರುವ ದಲಿತ ಮತದಾರರು ಪಾರದರ್ಶಕ ಆಡಳಿತವನ್ನು ಬಯಸಿದ್ದು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ದಲಿತ ಸಮುದಾಯದವರು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುವ ಉತ್ತಮ ವಾತಾವರಣ ಕಂಡುಬಂದಿದ್ದು, ದಲಿತ ನಾಯಕರುಗಳಿಗೆ ಕೂಡ ಉತ್ತಮ ಅವಕಾಶ ನೀಡುತ್ತಿರುವುದು ಪಕ್ಷ ಬಲವರ್ಧನೆಗೆ ಸಹಕಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್, ಪ್ರೇಮ್, ರಾಜೇಶ್, ಮಧುಕುಮಾರ್, ಸಂತೋಷ್ ಇದ್ದರು.