ಬೇಲೂರು: ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಬೇಲೂರು ವಿಧಾನಸಭಾ ಕ್ಷೇತ್ರದ ಸಮಗ್ರ ನೀರಾವರಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಬೇಲೂರು ಜನತೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣ ಬೆಂಬಲ ನೀಡುವ ಮೂಲಕ ಬಿಜೆಪಿಯ ಜಯಭೇರಿಗೆ ಕಾರಣಕರ್ತರಾಗುತ್ತಾರೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇಲೂರು ಕ್ಷೇತ್ರ ಭೌಗೋಳಿಕವಾಗಿ ವಿಭಿನ್ನವಾಗಿದೆ. ಕ್ಷೇತ್ರದ ಹಳೇಬೀಡು-ಮಾದೀಹಳ್ಳಿ-ಜಾವಗಲ್ ಬಯಲು ಸೀಮೆಯ ರೈತರು ತತ್ತರಿಸುವ ಸಂದರ್ಭದಲ್ಲಿ ರೈತ ನಾಯಕ ಮಾಜಿ ಮುಖ್ಯಮಂತ್ರಿಗಳು ಪಾದಯಾತ್ರೆ ನಡೆಸಿದ ಫಲದಿಂದಲೇ ಏತನೀರಾವರಿ ಹಾಗೂ ರಣಘಟ್ಟ ಯೋಜನೆಗೆ ಹಣವನ್ನು ನೀಡುವ ಮೂಲಕ ಬೇಲೂರಿಗೆ ಅಪಾರ ಕೊಡುಗೆ ನೀಡಲಾಗಿದೆ ಎಂದ ಅವರು, ಅಲ್ಲದೆ ಕಳೆದ 4 ವರ್ಷದಲ್ಲಿ ಅಧಿಕಾರಕ್ಕೆ ಬಂದ ಬಿಎಸ್ ಯಡಿಯೂರಪ್ಪನವರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ಬೇಲೂರು ಕ್ಷೇತ್ರಕ್ಕೆ ರೂ. 1800 ಕೋಟಿ ಹಣವನ್ನು ನೀಡಿದ್ದಾರೆ. ಆದರೆ ಸ್ಥಳೀಯ ಶಾಸಕ ಕೆ.ಎಸ್. ಲಿಂಗೇಶ ರೂ. 1800 ಕೋಟಿ ಹಣ ನನ್ನ ಪರಿಶ್ರಮ ಎನ್ನುವುದು ತೀರ ಶೋಚನೀಯವಾಗಿದೆ ಎಂದು ಬೇಲೂರು ಶಾಸಕರಿಗೆ ತೀರುಗೇಟು ನೀಡಿದರು.
ಬೇಲೂರು ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಐದಾರು ಮಂದಿ ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದು ಸತ್ಯ, ಹಾಗಂತ ಎಲ್ಲಿಯೂ ಭಿನ್ನಮತವಿಲ್ಲ, ನಮ್ಮದು ವ್ಯಕ್ತಿಗಿಂತ ಪಕ್ಷಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಸಂಬಂಧ ಎಲ್ಲಾ ಆಕಾಂಕ್ಷಿಗಳಲ್ಲಿ ಮಾತನಾಡಿದ್ದು, ಅವರು ಸಕಾರತ್ಮವಾಗಿ ಸ್ಪಂದಿಸಿ ಸಹಕಾರ ನೀಡುವ ಬಗ್ಗೆ ತಿಳಿಸಿದ್ದಾರೆ. ಬೇಲೂರು ಕ್ಷೇತ್ರವನ್ನು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಆಳ್ವಿಕೆ ನಡೆಸಿದೆ. ಆದರೆ ಕ್ಷೇತ್ರದಲ್ಲಿ ಇನ್ನು ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿದೆ. ಬೇಲೂರು ಪ್ರವಾಸೋದ್ಯಮ ಅಭಿವೃದ್ಧಿ ಮರಿಚಿಕೆಯಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೀಡಿದ ಮಹತ್ವಪೂರ್ಣ ಯೋಜನೆಗಳಿಂದ ಜನರು ಬಿಜೆಪಿಗೆ ಬಹುಮತ ನೀಡುತ್ತಾರೆ. ಹಾಗೇಯೆ ಬೇಲೂರಿನಲ್ಲಿ ಕಮಲ ಆರಳುವುದು ಖಚಿತವೆಂದರು.
ಹಾಸನ ಜಿಲ್ಲಾ ಬಿಜೆಪಿ ಚುನಾವಣೆ ಸಂಚಾಲಕ ರೇಣು ಕುಮಾರ್ ಮಾತನಾಡಿ, ಎಲ್ಲಾ ಪಕ್ಷದಲ್ಲಿ ಕೂಡ ಟಿಕೇಟ್ ಹಂಚಿಕೆ ಸಂದರ್ಭದಲ್ಲಿ ಗೊಂದಲ ಇರುವುದು ಸಾಮಾನ್ಯವಾಗಿದೆ. ಆದರೆ ಪಕ್ಷದ ವರಿಷ್ಠರು ಒಬ್ಬ ಅಭ್ಯರ್ಥಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಎಲ್ಲಾ ಆಕಾಂಕ್ಷಿಗಳ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಭಿನ್ನಮತವಿಲ್ಲದೆ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಪುಷ್ಪಗಿರಿ ಶ್ರೀಗಳ ನೇತೃತ್ವದಲ್ಲಿ ನಡೆದ ರಣಘಟ್ಟ ಯೋಜನೆ ಹೋರಾಟಕ್ಕೆ ಬಿಜೆಪಿ ಸರ್ಕಾರ ಹಣ ನೀಡಿ ಇಂದು ಕಾಮಗಾರಿಗೆ ಅನುವು ಮಾಡಿದೆ. ಕಳೆದ ಐದಾರು ವರ್ಷದಿಂದ ಹುಲ್ಲಹಳ್ಳಿ ಸುರೇಶ್ ಅವರು ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಮತ್ತು ಜನಪರ ಕೆಲಸಗಳು ಅವರ ಜಯಕ್ಕೆ ಕಾರಣವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಜಿಲ್ಲಾ ಉಪಾಧ್ಯಕ್ಷೆ ಬಿಕೆ ಚಂದ್ರಕಲಾ, ಪುರಸಭಾ ನಾಮಿನಿ ಸದಸ್ಯ ಪೈಂಟ್ ರವಿ, ತಾಲೂಕು ಚುನಾವಣೆ ಉಸ್ತುವಾರಿ ದಿನೇಶ ಹಾಜರಿದ್ದರು.