ಹಾಸನ: ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, ಜೆಡಿಎಸ್‌ನಿಂದ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದೇನೆ ಹಾಗೂ ಕಾತುರದಿಂದ ಕಾಯುತ್ತಿದ್ದೇನೆ ಎಂದು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಹೆಚ್‌ಪಿ ಸ್ವರೂಪ್ ತಿಳಿಸಿದರು.
ನಗರದ ತಮ್ಮ ನಿವಾಸದ ಎದುರು ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೆರಡು ಮೂರು ದಿನಗಳಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದ್ದು, ಈ ಪಟ್ಟಿಯಲ್ಲಿ ನನ್ನ ಹೆಸರು ಇರಲಿದೆ ಎಂಬ ವಿಶ್ವಾಸ ಇದೆ ಎಂದರು. ಈಗಾಗಲೇ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ನಿರತನಾಗಿದ್ದು, ಕಾರ್ಯಕರ್ತರು ಸೇರಿದಂತೆ ಎಲ್ಲರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗುವ ಕಾತುರದಲ್ಲಿ ಇದ್ದೇನೆ ಎಂದರು.
ಟಿಕೆಟ್ ಘೋಷಣೆ ಕುರಿತು ಮಾಜಿ ಪ್ರಧಾನಿ ಹಾಗೂ ವರಿಷ್ಟರಾದ ಎಚ್. ಡಿ ದೇವೇಗೌಡ, ಎಚ್. ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ತೀರ್ಮಾನಕ್ಕೆ ಬದ್ಧನಾಗಿದ್ದು, ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಕುರಿತು ನಾನು ಮತ್ತು ಕಾರ್ಯಕರ್ತರು ನಿರ್ಧರಿಸಿದ್ದೇವೆ ಎಂದರು.
ಪ್ರತಿ ವರ್ಷವೂ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಬಾರಿ ಚುನಾವಣೆ ನೀತಿ ಸಮಿತಿ ಇರುವುದರಿಂದ ಸರಳವಾಗಿ ಮನೆಯ ಮುಂದೆ ಆಚರಣೆ ಮಾಡಲಾಗುತ್ತಿದೆ. ಇಂದು ಸಹ ಹಲವು ಮಂದಿ ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳಿಂದ ಬಂದಂತಹ ಅಭಿಮಾನಿಗಳು ಕೇಕನ್ನು ಕತ್ತರಿಸಿ ನನ್ನೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸ್ವರೂಪ ತಿಳಿಸಿದರು.