ಹಾಸನ: ನಾನು ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಆಸಕ್ತಿ ಹೊಂದಿಲ್ಲ ಆದರೆ ಶಾಸಕ ಪ್ರೀತಂ ಗೌಡ ಅವರು ಹಾಸನ ವಿಧಾನ ಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲಿದ್ದು ಠೇವಣಿ ಕಳೆದುಕೊಳ್ಳುವೆ ಎಂದು ಹೇಳುತ್ತಿದ್ದಾರೆ, ಇಂತಹ ದುರಹಂಕಾರದ ಮಾತುಗಳನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೆಚ್. ಕೆ ಮಹೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿನ್ನೆ ಶಾಸಕ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ನಡೆದ ರ್‍ಯಾಲಿ ಸಂದರ್ಭದಲ್ಲಿ ಹಾಸನದಿಂದ ಕಳೆದ ಬಾರಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ ವ್ಯಕ್ತಿ ಮೂರನೇ ಸ್ಥಾನ ಪಡೆದಿದ್ದರು, ಈಗಲೂ ನನ್ನ ವಿರುದ್ಧ ಸ್ಪರ್ಧೆ ಮಾಡಲು ಹೊರಟಿದ್ದಾರೆ. ಅವರಿಗೆ ಠೇವಣಿ ಮತಗಳು ಬರುವುದಿಲ್ಲ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾರೆ. ಆದರೆ ಕಳೆದ ಬಾರಿಯ ಎರಡು ಚುನಾವಣೆಯಲ್ಲಿ 40,000 ಹಾಗೂ 53 ಸಾವಿರ ಮತಗಳನ್ನು ಪಡೆದಿದ್ದೇನೆ ಎಂದರು.
ಶಾಸಕ ಪ್ರೀತಂ ಗೌಡ ಅವರು ದೌರ್ಜನ್ಯದಿಂದ ಹಣ ಸಂಪಾದಿಸಿದ್ದಾರೆ. ನನ್ನ ಬಳಿ ಹಣ ಇಲ್ಲದ ಕಾರಣ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೂ ಸಹ ನನ್ನ ಸ್ಪರ್ಧೆ ಬಗ್ಗೆ ಶಾಸಕರು ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಶಾಸಕರು ಕೇವಲ ಕಾಂಕ್ರೀಟ್ ರಸ್ತೆ ಮಾಡುವ ಮೂಲಕ ಹಣವನ್ನು ದೋಚಿದ್ದಾರೆ. ನಗರದಲ್ಲಿ ಪಾರ್ಕ್ ನಿರ್ಮಾಣ ಮಾಡುವ ನೆಪದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಅಗತ್ಯ ಮಾಹಿತಿ ನೀಡುವಲ್ಲಿಯೂ ಅವರು ವಿಫಲರಾಗಿದ್ದಾರೆ ಎಂದರು.
ಶಾಸಕರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ, ಕೆರೆಗೆ ನೀರು ತುಂಬಿಸುವುದು ಹಾಗೂ ಹೋಬಳಿ ಮಟ್ಟದಲ್ಲಿ ಯಾವುದೇ ಮಹತ್ತರ ಕಾಮಗಾರಿಗಳನ್ನು ಮಾಡಿಲ್ಲ, ಕೇವಲ ಡುಪ್ಲಿಕೇಟ್ ವ್ಯವಹಾರ ಮಾಡುವುದರಲ್ಲಿ ನಿಸ್ಸೀಮರಾಗಿದ್ದು, ಆ ರೀತಿಯ ಅವ್ಯವಹಾರ ನಾನು ಮಾಡುವುದಿಲ್ಲ ಎಂದು ಟೀಕಿಸಿದ ಅವರು ನೆನ್ನೆ ನಡೆದಂತಹ ರ್‍ಯಾಲಿಯಲ್ಲಿ ಹಣವನ್ನು ನೀಡಿ ಜನರನ್ನು ಕರೆ ತಂದಿದ್ದಾರೆ. ಇವರಲ್ಲಿ 70ರಷ್ಟು ಮಂದಿ ಹಾಸನ ವಿಧಾನಸಭಾ ಕ್ಷೇತ್ರದವರಾಗಿದ್ದಾರೆ 30% ಬೇರಡೆಯಿಂದ ಬಂದಂತಹ ಜನರಾಗಿದ್ದು 5 ಕೋಟಿಗೂ ಹೆಚ್ಚು ಹಣ ವ್ಯಹಿಸಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೊಂದು ಹಣ ಬಂದಿದ್ದು ಎಲ್ಲಿಂದ ಎಂದು ಪ್ರಶ್ನಿಸಿದರು.
ಯಾವುದೇ ಒಬ್ಬ ಜನ ಪ್ರತಿನಿಧಿಯ ಸೋಲು ಗೆಲುವನ್ನು ಜನರು ನಿರ್ಧರಿಸಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಶಾಸಕ ಪ್ರೀತಮ್ ಗೌಡ ಅವರ ಗೆಲುವನ್ನು ಜನರೇ ನಿರ್ಧರಿಸಲಿದ್ದಾರೆ. ದೌರ್ಜನ್ಯ, ದುರಹಂಕಾರ, ಭಯ ಹುಟ್ಟಿಸುವ ವಾತಾವರಣ ಪ್ರಜ್ಞಾವಂತ ಮತದಾರರ ಎದುರು ನಡೆಯುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ನಿಂತರು ಅವರಿಗೆ ಬೆಂಬಲಿಸಿ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಸುಳ್ಳು ಭರವಸೆ ನೀಡುವುದಿಲ್ಲ
ಇತ್ತೀಚಿಗೆ ಸಾರ್ವಜನಿಕ ಸಭೆ ಒಂದರಲ್ಲಿ ಗವೇನಹಳ್ಳಿ ಜನರಿಗೆ ಐಐಟಿ ಸ್ಥಾಪನೆಗೆ ಮೀಸಲಿರುವ ಜಮೀನನ್ನು ಬಿಡಿಸಿ ಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಾರೆ. ಈಗಾಗಲೇ ಆ ಜಮೀನು 4(1), 6(1) ಆಗಿದ್ದು ಇವರಂತೆ ನಾನು ಸುಳ್ಳು ಭರವಸೆಯನ್ನು ನೀಡುವುದಿಲ್ಲ ಎಂದರು.