ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎ.ಮಂಜು ನಡುವಿನ ಲೋಕಸಭೆ ಚುನಾವಣೆ ವಿಚಾರ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಸಂಬಂಧ ನಾನು ರಾಜಿ ಮಾಡಿಕೊಂಡಿದ್ದರೆ ನನಗೆ ಮಂಜುನಾಥ ಸ್ವಾಮಿ ಶಿಕ್ಷೆ ನೀಡಲಿ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಸವಾಲು ಹಾಕಿದರು.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಚಿವ ಎ.ಮಂಜು ಜೊತೆ ಮಗನಿಗಾಗಿ ರೇವಣ್ಣ ರಾಜಿ ಮಾಡಿಕೊಂಡಿದ್ದಾರೆ ಎಂದು ಎ.ಟಿ. ರಾಮಸ್ವಾಮಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು. ನಾನು ಮತ್ತೆ ಎ.ಮಂಜು ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರೆ ಅದನ್ನು ಸಾಬೀತುಪಡಿಸಲಿ, ರಾಮಸ್ವಾಮಿ ಏನು ಹೇಳುತ್ತಾರೆ ಆ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ರೇವಣ್ಣ ಗುಡುಗಿದರು.
ಯಾವುದೇ ಒಂದು ನೆಪ ಇಟ್ಟುಕೊಂಡು ಆರೋಪ ಮಾಡಬಾರದು ಇಂದಿಗೂ ಸಹ ಪ್ರಜ್ವಲ್ ರೇವಣ್ಣ ಮತ್ತು ಎ.ಮಂಜು ನಡುವಿನ ಲೋಕಸಭೆ ಚುನಾವಣೆ ವಿಚಾರದ ಪ್ರಕರಣ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ ಎಂದರು.
ಎ.ಮಂಜು ಪಕ್ಷಕ್ಕೆ ಬಂದರೆ ನಾನು ಬೇಡ ಅನ್ನೋಕೆ ಆಗುತ್ತದೆಯೇ ಅದು ಪಕ್ಷದ ನಿರ್ಧಾರ ಕೆಲವರು ಪಕ್ಷದಲ್ಲೇ ಇದ್ದುಕೊಂಡು ಚಾಕು ಹಾಕಿದರು ಎಂದು ಆರೋಪಿಸಿದ ರೇವಣ್ಣ, ನಾನು ಅರಕಲಗೂಡು ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆ ಮಾಡಿಲ್ಲ ಇತ್ತೀಚಿಗೆ ಕೆ.ಟಿ ರಾಮಸ್ವಾಮಿ ಅವರಿಗೆ ಟಿಕೆಟ್ ನೀಡಬೇಡಿ ಎಂದು ನನ್ನ ಮನೆಗೆ ಬಂದಂತಹ ನೂರಾರು ಮಂದಿಯನ್ನು ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿ ವಾಪಸ್ಸು ಕಳುಹಿಸಿದ್ದೇನೆ. ಇದೀಗ ನನ್ನ ವಿರುದ್ಧ ಹೇಳಿಕೆ ನೀಡಿರುವ ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.
ಮಾಜಿ ಪಿಎಂ ಎಚ್.ಡಿ. ದೇವೇಗೌಡರನ್ನು ಹೊರಗೆ ಕಳಿಸಿದರು ಎಂದು ಹೇಳಿದ್ದಾರೆ. ಆ ಒಂದು ವಿಚಾರವನ್ನು ಬಹಿರಂಗಪಡಿಸಲು ಎರಡು ವರ್ಷ ಬೇಕೇ? ಎಂದು ಪ್ರಶ್ನಿಸಿದರು, ಸೀಟ್‌ಗಾಗಿ ಯಾರ ಮನೆ ಬಾಗಿಲು ಹೋಗಲ್ಲ ಎಂದು ಹೇಳಿದ್ದರು ಆದರೆ ಎರಡು ವರ್ಷದಿಂದ ರಾಮಸ್ವಾಮಿಯವರು ಕಾಂಗ್ರೆಸ್ ಬಾಗಿಲನ್ನು ತಟ್ಟುತ್ತಿರುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ನಿಂದ ಹೊರ ಹೋಗುವವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು. ರಾಮಸ್ವಾಮಿಯವರು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೂ ಬರಲಿಲ್ಲ, ಹಾಸನದಲ್ಲಿ ನಡೆದಂತ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ, ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರಿಗೂ ದೇವರು ಒಳ್ಳೆಯದು ಮಾಡಲಿ 15 ವರ್ಷ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದಾರೆ. ನಾನು ದೇವರಾಣೆಗೂ ಈ ಪಕ್ಷವನ್ನು ಬಿಡಲ್ಲ ಎಂದು ಕುಮಾರಸ್ವಾಮಿ ಅವರ ಮನೆಯಲ್ಲಿ ಹೇಳಿದ್ದರು, ರಾಗಿ ಕಳ್ಳತನ ವಿಚಾರದಲ್ಲಿ ಧರ್ಮಸ್ಥಳ ಹೋಗಿ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಿದ ಶಿವಲಿಂಗೇ ಗೌಡರು ಈ ವಿಚಾರದಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ, ದೇವೇಗೌಡರನ್ನು ನೋಡಿ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡರು ಹೇಳಿದ್ದರು ಸಹ, ನಾನೇ ನನ್ನ ಮಗನನ್ನು ರಾಜೀನಾಮೆ ಕೊಡಿಸಿ ಎಂಎಲ್ಸಿ ಮಾಡೋವೆ ಎಂದು ಶಿವಲಿಂಗೇಗೌಡರಿಗೆ ಹೇಳಿದ್ದೆ. ನಾವು ಪ್ರಜ್ವಲ್ ಅವರನ್ನು ಎಂಪಿ ಮಾಡುವ ವಿಚಾರದಲ್ಲಿ ಏಕ ಪಕ್ಷಿಯ ನಿರ್ಧಾರ ಕೈಗೊಂಡಿಲ್ಲ ಎಂದು ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಅವರು ದೃತರಾಷ್ಟ್ರನನ್ನು ಇಟ್ಟುಕೊಂಡರು, ಆದ್ದರಿಂದ ಕಳೆದ ಬಾರಿ ಸರ್ಕಾರ ರಚನೆ ವೇಳೆ ಸಂಕಷ್ಟ ಎದುರಿಸಿದರು. ರಾಮ-ಆಂಜನೇಯನನ್ನು ಇಟ್ಟುಕೊಂಡಿದ್ದರೆ ಭುಜಕ್ಕೆ ಭುಜ ಕೊಡುತ್ತಿದ್ದರು ಎಂದು ಟೀಕಿಸಿದರು.ಹಾಸನ ಜೆಡಿಎಸ್ ಟಿಕೆಟ್ ಗೊಂದಲ ವಿಚಾರವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪುನರುತ್ಚರಿಸಿದ ಅವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ಮೂಲಕ ರೈತರ ಸಾಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಎ.ಟಿ ರಾಮಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಈ ವಿಚಾರವಾಗಿ ಯಾವುದೇ ತನಿಖೆಗೆ ಸಿದ್ದ, ಸಹಕಾರಿ ಬ್ಯಾಂಕುಗಳಲ್ಲಿ ಜಾರಿಯಲ್ಲಿರುವ ನಿಯಮದಂತೆ ಯಾವುದೇ ಯೋಜನೆಯ ಹಣವು ರೈತರ ಖಾತೆಗೆ ನೇರವಾಗಿ ಜಮೆ ಆಗಲಿದ್ದು, ಕೆಲವು ಲೋಪ ದೋಷದಿಂದ ಪಹಣಿಯಲ್ಲಿ ಸಾಲ ಪಡೆದಿರುವ ಬಗ್ಗೆ ನಮೂದಾಗಿರಬಹುದು ಈ ಬಗ್ಗೆ ಎ.ಟಿ ರಾಮಸ್ವಾಮಿ ಅವರೇ ಉಸ್ತುವಾರಿ ವಹಿಸಿಕೊಂಡು ತನಿಖೆಗೆ ಶಿಫಾರಸು ಮಾಡಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇವಣ್ಣ ಅವರು ನನಗೆ ಆರಡಿ, ಮೂರಡಿ ಜಾಗ ಸಾಕು, ನನಗೆ ಕಾರಿನಲ್ಲಿಯೇ ಕುಳಿತರು ನಿದ್ದೆ ಬರುತ್ತದೆ. ಬೇಕಾದರೆ ಡಿಕೆಶಿ ಅವರು ಇನ್ನೂ ಎರಡು ಅಡಿ ಹೆಚ್ಚಾಗಿ ಜಾಗ ಬಳಸಿಕೊಳ್ಳಲಿ ಎಂದು ಲೇವಾಡಿ ಮಾಡಿದರು.
ನಾನು ನನ್ನ ಮನೆಗೋಸ್ಕರ ಫ್ಲೈ ಓವರ್ ಮಾಡಿಕೊಂಡಿದ್ದೇನೆಯೇ? ಪರಿಸ್ಥಿತಿ ನೋಡಿ ಮಾತನಾಡಬೇಕು ಒಂದು ಪಕ್ಷದ ಅಧ್ಯಕ್ಷ ಈ ರೀತಿ ಮಾತನಾಡಬಾರದು, ಅವನಿಗೆ ಮಾನ ಮರ್ಯಾದೆ ಇದೆಯೇ, ಎಂದು ಏಕವಚನದಲ್ಲಿಯೇ ಜರಿದರು.