ಹಾಸನ: ನಾವು ರಾಜ್ಯದ 224 ಕ್ಷೇತ್ರದಲ್ಲಿಯೂ ಚುನಾವಣೆಗೆ ಸಿದ್ದರಾಗಿದ್ದೇವೆ ಎಂದು ಮಾಜಿ ಸಚಿವ ಜೆಡಿಎಸ್ ಧುರೀಣ ಹೆಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ದರಾಗಿರಲು ಸೂಚನೆ ನೀಡಿರುವ ಬೆನ್ನಲ್ಲಿ ಮಾತನಾಡಿದ ಅವರು ರಾಜ್ಯದ 224 ಕ್ಷೇತ್ರದಲ್ಲೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಮಾ. 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಒಂದು ಲಕ್ಷ ಮಂದಿ ಪಾಲ್ಗೊಳ್ಳಲಿರುವುದಾಗಿ ಹೇಳಿದ ಅವರು, ಒಂದೊಂದು ವಿಧಾನಸಭಾ ಕ್ಷೇತ್ರದಿಂದ ಸರಿ ಸುಮಾರು 150 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಿಂದಲೇ ಸರಿ ಸುಮಾರು ಒಂದು ಸಾವಿರ ಬಸ್ ವ್ಯವಸ್ಥೆ ಮಾಡಲಿರುವುದಾಗಿ ಹೇಳಿದರು.
ಮಾ. 26ರಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಅಧ್ಯಕ್ಷರಾದ ಇಬ್ರಾಂಹಿಂರವರು, ದೇವೇಗೌಡರು, ಕುಮಾರಣ್ಣ ಪಟ್ಟಿ ರಿಲೀಸ್ ಮಾಡಲಿದ್ದಾರೆಂದ ರೇವಣ್ಣ, ನರೇಂದ್ರಮೋದಿ, ಅಮಿತ್ ಷಾ ರಾಜ್ಯಕ್ಕೆ ಪದೇ ಪದೇ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿ ಅವರು ಆಗಾಗ ರಾಜ್ಯಕ್ಕೆ ಬಂದರೆ ನಮಗೆ ಒಳ್ಳೆದಾಗುತ್ತೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದ ರೇವಣ್ಣ, ರಾಹುಲ್ ಗಾಂಧಿ ಅವರ ಮೇಲೆ ಮಾನ ನಷ್ಟ ಮೊಕದ್ದಮೆ ದಾಖಲಿಸಿರುವುದು ತಪ್ಪು ಎಂದು ಖಂಡಿಸಿದರಲ್ಲದೆ, ರಾಹುಲ್ ಗಾಂಧಿಯವರ ಕುಟುಂಬ ದೇಶಕ್ಕೆ, ರಾಷ್ಟ್ರಕ್ಕೆ ಕೊಡುಗೆ ನೀಡಿದೆ. ಇಂತಹ ಕುಟುಂಬದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿರುವುದು ಸರಿಯಲ್ಲವೆಂದು ಅಭಿಪ್ರಾಯಿಸಿದ ಅವರು, ಕೋರ್ಟ್ ತೀರ್ಪಿನ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲವೆಂದರಲ್ಲದೆ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡದಂತೆ ಮನವಿ ಮಾಡುವುದಾಗಿ ಹೇಳಿದರು.