ಹಾಸನ: ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಒತ್ತಾಯಿಸಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಸನ, ಅರಸೀಕೆರೆ, ಬೇಲೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ನಡೆಯುತ್ತಿದ್ದು, ಒಂದು ವೋಟಿಗೆ 2-3 ಸಾವಿರ ರೂ.ಗಳ ಆಮಿಷ ಮತದಾರರಿಗೆ ಒಡ್ಡಲಾಗುತ್ತಿದೆ. ಮತದಾನ ಮಾಡುವ ವೇಳೆ ಫೋಟೋ ತೆಗೆದು ತೋರಿಸಬೇಕು ಎಂಬ ನಿಯಮವನ್ನು ಕೆಲವರು ಹೇರಿದ್ದು, ಯಾವುದೇ ಕಾರಣಕ್ಕೂ ಮತದಾನ ಕೇಂದ್ರಕ್ಕೆ ಮೊಬೈಲ್ ನೊಂದಿಗೆ ಪ್ರವೇಶವನ್ನು ನೀಡಬಾರದು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಚುನಾವಣಾ ಆಯೋಗಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಕೆಲವರು ಸೋಲಿನ ಭೀತಿಯಿಂದ ಮತದಾರರಿಗೆ ಹಣದ ಆಮೀಷವನ್ನು ಒಡ್ಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಎರಡು ರಾಷ್ಟ್ರೀಯ ಪಕ್ಷಗಳು 120 ರಿಂದ 140 ಸೀಟ್ ಗಳನ್ನು ಗೆಲ್ಲುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಭರವಸೆ ನೀಡಿದ್ದು, ಕಳೆದ 60 ವರ್ಷ ಜನರಿಗೆ ನೀಡದ ಗ್ಯಾರಂಟಿಯನ್ನು ಈಗ ಕೊಡಲು ಹೊರಟಿದೆ ಅದು ಸಾಧ್ಯವಿಲ್ಲ ಎಂದರು. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಕೊನೆಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗ ಪ್ರಚಾರದಲ್ಲಿ ಹೇಳುತ್ತಾರೆ.
ಆದರೆ ಆ ಪಕ್ಷದಿಂದಲೇ ಕುಟುಂಬ ರಾಜಕಾರಣ ಶುರುವಾಗಿದ್ದು, ಕಳೆದ ಬಾರಿಯ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದಿದ್ದೆ ಅವರಿಂದ. ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಟ್ಟಿದ್ದಾರೆ ಐದು ವರ್ಷ ಸಂಪೂರ್ಣವಾಗಿ ಅಧಿಕಾರ ನಡೆಸಬಹುದಾಗಿತ್ತು. ಅಂದು ಜೋಡೆತ್ತು ಎಂದು ಹಾಡಿ ಹೊಗಳಿದರು ಆದರೆ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಕೆಲಸ ಮಾಡಲು ಬಿಡಲಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊಂದಾಣಿಕೆಯ ರಾಜಕಾರಣ ಮಾಡುತ್ತಿವೆ, ಕೋಲಾರದಲ್ಲಿ ನಾಲ್ಕು ಕಡೆ ಹೊಂದಾಣಿಕೆ ಮಾಡಿಕೊಂಡಿದ್ದು, ಇವರಿಂದ ಪ್ರಾದೇಶಿಕ ಪಕ್ಷಗಳು ನೈತಿಕತೆಯ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
15 ವರ್ಷ ಗಿಣಿಯಂತೆ ಸಾಕಿದ ಶಿವಲಿಂಗೇಗೌಡರು ಎರಡು ವರ್ಷ ಪಕ್ಷ ಬಿಡಲು ಸಮಯ ಪಡೆದರು. ಅವರಿಗೆ ಹೊಟ್ಟೆ ತುಂಬಿದ್ದು, ಅಲ್ಲಿ ಸ್ವಲ್ಪ ಹಣ ಮಾಡಿಕೊಳ್ಳಲು ಹೋಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್-ನಾಯಕರು, ಜೆಡಿಎಸ್ ಈ ಬಾರಿ 20 ಸೀಟು ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ. ಆದರೆ ನಾವು 120 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ, ಕಳೆದ ಬಾರಿಯೂ ಇದೇ ರೀತಿ ಟೀಕೆ ಮಾಡಿದರು, ಎಷ್ಟು ಸ್ಥಾನಗಳು ಗೆಲ್ಲಲಾಯಿತು ಎಂದು ಎಲ್ಲರಿಗೂ ತಿಳಿದಿದೆ ಎಂದು ತಿರುಗೇಟು ನೀಡಿದರು.
ನಮ್ಮ ಪಕ್ಷದಲ್ಲಿ ಘಟಾನುಘಟಿ ನಾಯಕರು, ಸಿನಿಮಾ,ನಟರು ಪ್ರಚಾರಕ್ಕೆ ಇಲ್ಲ. ದೇವೇಗೌಡರು, ಕುಮಾರಣ್ಣನೇ ನಮಗೆ ಸ್ಟಾರ್ ಪ್ರಚಾರಕರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಣ್ಣನನ್ನು ಬ್ರದರ್ ಎಂದು ಕಡತಗಳಿಗೆ ಸಹಿ ಹಾಕಿಸಿಕೊಂಡರು, ಇದೀಗ ಜೆಡಿಎಸ್ ಪಕ್ಷವನ್ನು ಮುಗಿಸುವ ಮಾತನಾಡುತ್ತಿದ್ದಾರೆ. ಅರಕಲಗೂಡಿನ ಎಟಿ ರಾಮಸ್ವಾಮಿ ಅವರನ್ನು ತಿರುಗಾಡಿಸಿ ನಂತರ ಕೈಕೊಟ್ಟರು ಎಂದು ಟೀಕಿಸಿದರು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಜಪ ಮಾಡದಿದ್ದರೆ ನಿದ್ದೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ ರೇವಣ್ಣ ಅವರು ದೇಶದ ಪ್ರಧಾನಿ ಸಹ ಜೆಡಿಎಸ್ ಜಪ ಮಾಡುವಾಗ ಇವರು ಯಾವ ಲೆಕ್ಕ ಎಂದು ಹೇಳಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯನ್ನು ಕರೆಸಿ ಹಾಸನದಲ್ಲಿ ಜೆಡಿಎಸ್ ಅನ್ನು ಟೀಕಿಸಿದರು. ಆದ್ದರಿಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಗೆ ಕಾರಣವಾಯಿತು. ಇದೀಗ ಅದೇ ತಪ್ಪನ್ನು ಕಾಂಗ್ರೆಸ್ ಮಾಡುತ್ತಿದ್ದು ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್ ಅವರು ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ. ಭವಾನಿ ಅವರು ಸ್ವರೂಪ್ ಅವರನ್ನು ಮೂರನೇ ಮಗ ಎಂದು ಹೇಳಿದ್ದಾರೆ. ಜಿಲ್ಲೆಯ ಹಾಗೂ ನಗರದ ಅಭಿವೃದ್ಧಿಗೆ ಅಡ್ಡಿ ಮಾಡುವ ಕುತಂತ್ರಿಗಳನ್ನು ಸೋಲಿಸಬೇಕು ಎಂದು ಹೇಳಿದರು.