ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೊಲೀಸರ ಭದ್ರತೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ದೂರಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ಡಿ.ವೈ.ಎಸ್.ಪಿ ಉದಯ್ ಬಾಸ್ಕರ್ ನೇತೃತ್ವದಲ್ಲಿ ಇಲ್ಲಿಯ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು ಭದ್ರತೆ ನೀಡುತ್ತಾ ಹಾಸನ ಶಾಸಕರ ಚುನಾವಣೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆಂದು ದೂರಿದ ಅವರು ನಗರದ ರಿಂಗ್ ರಸ್ತೆಯ ೮೦ ಅಡಿ ರಸ್ತೆಯನ್ನು ಬಂದ್ ಮಾಡಿ ಪೊಲೀಸ್ ಭದ್ರತೆ ನೀಡಿ ಅಲ್ಲಿ ಮಹಿಳಾ ಮತದಾರರಿಗೆ ಅಷ್ಟ ಲಕ್ಷ್ಮಿ ಪೋಟೋ, ದುಡ್ಡು, ಕಿಟ್ ನೀಡಲಾಗಿದೆ. ಇದರಲ್ಲಿ ಶಾಸಕರ ಚಿತ್ರವೂ ಇದೆ ಆದರೆ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲವೆಂದು ಕಿಡಿ ಕಾರಿದರು. ಡಿವೈಎಸ್‌ಪಿ ವಿರುದ್ಧ ಸಂಜೆ ವೇಳೆಗೆ ಕ್ರಮ ಕೈಗೊಳ್ಳದಿದ್ದರೆ ನಾಳೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಹಾಸನದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ, ಸುಲಿಗೆ, ಕೊಲೆ ಪ್ರಕರಣಗಳಿಗೆ ಹಾಸನ ಡಿ.ವೈ.ಎಸ್.ಪಿ ಉದಯ್ ಬಾಸ್ಕರ್ ಅವರೇ ಗಾಡ್ ಫಾದರ್ ಎಂದು ಕಿಡಿ ಕಾರಿದ ರೇವಣ್ಣ ಈ ಅಧಿಕಾರಿ ವಿರುದ್ಧ ಜೆಡಿಎಸ್ ಇಂದು ಪ್ರತಿಭಟನೆಗೆ ಕರೆ ನೀಡಿದ್ದು, ಆದರೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿ ರಾಮ್ ಶಂಕರ್ ಅವರು ತಮಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ ಹಿನ್ನಲೆಯಲ್ಲಿ ಇಂದಿನ ಪ್ರತಿಭಟನೆ ಕೈ ಬಿಟ್ಟಿದ್ದು, ಆದರೆ ಇಂದು ಸಂಜೆ ವೇಳೆಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ನಾಳೆ ಎಸ್ಪಿ ಕಚೇರಿ ಮುಂದೆ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಅಲ್ಲದೆ ಹಾಸನ ಡಿವೈಎಸ್‌ಪಿ ಉದಯ್ ಭಾಸ್ಕರ ಸೇರಿದಂತೆ ಕೆಲ ಇನ್ಸ್‌ಪೆಕ್ಟರ್‌ಗಳು, ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಕೂಡಲೇ ಅಮಾನತುಪಡಿಸಬೇಕು ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜ್ಯ ಚುನಾವಣಾ ಆಯೋಗ ಹಾಗೂ ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ ರೇವಣ್ಣ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲು ಕರೆ ಮಾಡಿದರೆ ಅವರು ಕರೆ ಸ್ವೀಕಾರ ಮಾಡುವುದಿಲ್ಲ. ಅವರು ನಿದ್ದೆಗೆ ಜಾರಿದಂತಿದೆ. ಹಾಸನದ ಡಿ.ವೈ.ಎಸ್.ಪಿಗೆ ಹೆದರಿ ನಿದ್ದೆ ಮಾಡುತ್ತಿದ್ದಾರೆಂದು ರೇವಣ್ಣ ಛೇಡಿಸಿದರು.
ಒಂದೇ ಹಂತದ ಚುನಾವಣಾ: ಸ್ವಾಗತಾರ್ಹ
ಕೇಂದ್ರ ಚುನಾವಣೆ ಆಯೋಗ ಒಂದೇ ಹಂತದಲ್ಲಿ ಚುನಾವಣೆ ಮಾಡಲು ಕೈಗೊಂಡಿರುವ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು ಕೆಲವೆಡೆ ಕೆಲ ಅಧಿಕಾರಿಗಳು ಬಿಜೆಪಿ ಜೊತೆ ಸೇರಿ ನಿಷ್ಪಕ್ಷಪಾತ ಚುನಾವಣೆ ನಡೆಯುವ ಅನುಮಾನವಿದ್ದು ಆದ್ದರಿಂದ ಅಗತ್ಯ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಒಳಿತು ಎಂದು ಮನವಿ ಮಾಡಿದರು.
ಶೀಘ್ರದಲ್ಲಿಯೇ ತೀರ್ಮಾನ
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು. ಹಾಸನದಲ್ಲಿ ಜೆಡಿಎಸ್ ಬಲವಾಗಿದೆ. ಜೆಡಿಎಸ್ ಪಕ್ಷದ ನಾಯಕರುಗಳಾದ ಬಿ.ವಿ.ಕರೀಗೌಡರು, ಎಸ್.ದ್ಯಾವೇಗೌಡರು, ಕೆ.ಎಂ. ರಾಜೇಗೌಡರೊಂದಿಗೆ ಮತ್ತು ಪಕ್ಷದ ಮುಖಂಡರೊಂದಿಗೆ ಕುಳಿತು ಚರ್ಚೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.
ಸ್ವರೂಪ್ ಯಾರು ಎಂದು ಗೊತ್ತಿಲ್ಲ- ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಹಾಗೂ ಘೋಷಣೆ ಸಂಬಂಧ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ರೇವಣ್ಣ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ಅವರೇನು ಹೇಳಿದ್ದಾರೆ ನಾನು ನೋಡಿಲ್ಲ. ಅಂತಹದ್ದನ್ನು ನಾನು ನೋಡುವುದಿಲ್ಲವೆಂದು ಹೇಳಿದ ರೇವಣ್ಣ, ಸ್ವರೂಪ್ ಯಾರು ಎಂದು ನನಗೆ ಗೊತ್ತಿಲ್ಲ. ಆತ ಯಾಕೆ ಯಾರನ್ನು ಭೇಟಿ ಮಾಡಿದ್ದಾನೆ ಗೊತ್ತಿಲ್ಲವೆಂದು ರೇವಣ್ಣ ಹೇಳಿದರು.