ಹಾಸನ: ೨೦೨೩ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಅರಸೀಕೆರೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಮುಖಂಡ ಶಶಿಧರ ಮನೆಗೆ ಭೇಟಿ ನೀಡುವುದು ಅಚ್ಚರಿಗೆ ಕಾರಣವಾಗಿದೆ.
ಅರಸೀಕೆರೆಯ ಕಾಂಗ್ರೆಸ್ ಮುಖಂಡ ಜೆ.ಪಿ ಶಶಿಧರ ಅವರು ಕಳೆದ ಅರಸೀಕೆರೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧ ೫೦,೦೦೦ಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತಗಳಿರುವ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರಾಗಿರುವ ಶಶಿಧರವರು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಈ ಭೇಟಿ ಅಚ್ಚರಿಯ ಬೆಳವಣಿಗೆಯಾಗಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುತ್ತಿರುವ ಬೆನ್ನಲ್ಲೇ ಶಶಿಧರ ಅವರ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದು ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ರಾಜ್ಯ ನಾಯಕರು ಸಹ ಭೇಟಿ ನೀಡಿ ಶಿವಲಿಂಗೇಗೌಡರ ಪರ ಪ್ರಚಾರ ಮಾಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಬಾಣಾವರ ಅಶೋಕ್ ಅವರು ಕಣಕ್ಕಿಳಿಯಲಿದ್ದು ಶಶಿಧರ ಮನೆಗೆ ಬಾಣಾವರ ಅಶೋಕ ಸೇರಿದಂತೆ ಜೆಡಿಎಸ್ ನ ಪ್ರಮುಖ ಮುಖಂಡರು ಭೇಟಿ ವೇಳೆ ಕಾಣಿಸಿಕೊಂಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾಣಾವರ ಅಶೋಕ ಅವರಿಗೆ ಬೆಂಬಲಿಸುವಂತೆ ಹಾಗೂ ಜೆಡಿಎಸ್ ಗೆಲುವಿಗೆ ಸಹಕಾರ ನೀಡುವಂತೆ ಶಶಿಧರ ಅವರಲ್ಲಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಬಾಣಾವರ ಅಶೋಕ್ ಅವರಿಗೆ ಬೆಂಬಲ ಹಾಗೂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಶಶಿಧರ ಅವರು ಕುಮಾರಸ್ವಾಮಿ ಅವರಲ್ಲಿ ಕೆಲ ದಿನಗಳ ಕಾಲಾವಕಾಶ ಕೇಳಿದ್ದು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.