ಬೇಲೂರು: ಮೇ 10ರಂದು ಮತದಾನ, 13ಕ್ಕೆ ಎಣಿಕೆ, 18ರಂದು ಎಚ್.ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿ ಪ್ರಮಾಣ ಸ್ವೀಕರಿಸುವುದು ಶತಸಿದ್ಧ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಬೇಲೂರು ಸಮೀಪದಲ್ಲಿರುವ ಸುರಪುರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಎಸ್ ಲಿಂಗೇಶ್ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. ತಾಲೂಕಿನ ನಿಷ್ಠಾವಂತ, ಸರಳ, ಸಜ್ಜನಿಕೆಯ ಕೆ.ಎಸ್ ಲಿಂಗೇಶ್ ಅವರನ್ನು ಮತ್ತೆ ಗೆಲ್ಲಿಸಬೇಕು. ಕ್ಷೇತ್ರದ ಜನತೆ ನಡುವೆ ಇದ್ದು, ಜನಾನುರಾಗಿರುವ ಶಾಸಕ ಲಿಂಗೇಶ್ ಒಳ್ಳೆಯ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಇಂತಹ ಸರಳ ಸಜ್ಜನಿಕೆಯ ಇವರನ್ನು ಮತ್ತೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವಂತೆ ಅವರು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ಈ ರಾಜ್ಯದ ಜ್ವಲಂತ ಸಮಸ್ಯೆಗಳಾದ ಅರೋಗ್ಯ, ವಸತಿ, ಶಿಕ್ಷಣ, ನೀರಾವರಿ ಬಗೆಹರಿಸಲು ಸೇರಿದ್ದೇವೆ. ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ದೇವೇಗೌಡರು ಪ್ರಧಾನಿ ಆಗಿದ್ದ ವೇಳೆಯಲ್ಲಿ ಕರ್ನಾಟಕ ರಾಜ್ಯದ ನೀರಾವರಿಗೆ 1800 ಕೋಟಿ ಅನುದಾನ ಮೀಸಲಿರಿಸಿದ್ದರು. ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡಿ ರಸ್ತೆ, ವಿಮಾನ ನಿಲ್ದಾಣ ಮಾಡಿದ್ದರು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದ ಜನರು ಸ್ವಾಭಿಮಾನದಿಂದ ಪ್ರಾದೇಶಿಕ ಪಕ್ಷಗಳನ್ನು ಅಧಿಕಾರಕ್ಕೆ ತಂದಿದ್ದಾರೆ. ಇಂತಹ ಸ್ವಾಭಿಮಾನ ಕರ್ನಾಟಕದ ಜನತೆಗೆ ಏಕಿಲ್ಲ ಎಂದರು.
ಬಿಜೆಪಿ ಪಕ್ಷಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ದೇಶದಲ್ಲಿ ರೈತರಿಗೆ ರಕ್ಷಣೆ ಇಲ್ಲ, ಉತ್ತಮ ಅರೋಗ್ಯ ವ್ಯವಸ್ಥೆ ಇಲ್ಲ, ಪ್ರವಾಹ ಬಂದ ಸಮಯದಲ್ಲಿ ಪ್ರಧಾನಿ ಕರ್ನಾಟಕಕ್ಕೆ ಬಂದಿಲ್ಲ, ಈಗ ಚುನಾವಣೆ ಸಮಯದಲ್ಲಿ ಕರ್ನಾಟಕಕ್ಕೆ ಬಂದಿರೋದು ಯಾಕೆ? ಬಿಜೆಪಿಯ 25 ಸಂಸದರು ನಿಷ್ಪ್ರಯೋಜಕರು, ಕರ್ನಾಟಕದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಚರ್ಚಿಸಲು ಸಿದ್ದರಿಲ್ಲ ಎಂದು ಆರೋಪಿಸಿದರು.
ಮೋದಿ ಅವರಿಗೆ ಹೆಂಡ್ತಿ ಇಲ್ಲ, ಮಕ್ಕಳಿಲ್ಲ. ನಿಮಗೆ ಏನು ಗೊತ್ತು ಜನರ ಕಷ್ಟವೆಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಯ ಭ್ರಷ್ಟ ಸರ್ಕಾರವನ್ನು ಈಗಾಗಲೇ ನೀವೆಲ್ಲ ನೋಡಿದ್ದೀರಾ, ಕುಮಾರಣ್ಣ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ, ರಾಜ್ಯವೇ ಅಭಿವೃದ್ಧಿಯಾಗುತ್ತದೆ ಎಂದರು.
ತೊ.ಚ.ಅನಂತಸುಬ್ಬಾರಯ, ಎಂ.ಎ ನಾಗರಾಜು, ಸಿ.ಹೆಚ್ ಮಹೇಶ, ಬಿಟ್ರವಳ್ಳಿ ಉಮೇಶ, ಶ್ರೀನಿಧಿ, ನಾಗೇಶ, ಲತಾ ದೀಲಿಪ್ ಇದ್ದರು.