ಹಾಸನ: ದಾಸರಕೊಪ್ಪಲು ಯಾವುದೇ ಪಕ್ಷದ ಸ್ವತ್ತಲ್ಲ, ವಿರೋಧಿಗಳ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಹೇಳಿದರು.
ಹಾಸನ ವಿಧಾನಸಭಾ ಕ್ಷೇತ್ರದ ದಾಸರಕೊಪ್ಪಲು, ಮಾವಿನ ಹಳ್ಳಿ, ಎರೆಹಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ವಿರೋಧ ಪಕ್ಷದ ಕೆಲ ಮುಖಂಡರು ದಾಸರಕೊಪ್ಪಲಿನ ಜನರಿಗೆ ಜೆಡಿಎಸ್ ಪಕ್ಷದ ಪರ ಮತ ಪ್ರಚಾರ ಮಾಡದಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ದಾಸರಕೊಪ್ಪಲು ಯಾವುದೇ ಒಂದು ಪಕ್ಷದ ಸ್ವತ್ತಲ್ಲ, ಇಲ್ಲಿನ ಜನರು ಅವರ ಬೆದರಿಕೆಗೆ ಹೆದರಬಾರದು, ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಿದ್ದು ಹಾಗೂ ದಾಸರ ಕೊಪ್ಪಲಿನಲ್ಲಿಯೇ ಹುಟ್ಟಿ ಬೆಳೆದವರು, ನಾನು ಸಹ ಇಲ್ಲಿಯೇ ಹುಟ್ಟಿ ಬೆಳೆದಿದ್ದು, ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ಎಂದರು. ಕಳೆದ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಕೊರತೆಯಿಂದ ನಮ್ಮ ತಂದೆ ಸೋಲಬೇಕಾಯಿತು. ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಹಾಗೂ ದಾಸರಕೊಪ್ಪಲು ಭಾಗದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದ್ದು, ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟ ಸುಖಗಳಿಗೆ ಭಾಗಿಯಾಗಲಿದ್ದೇನೆ. ದಾಸರ ಕೊಪ್ಪಲಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದರು.
ನಮ್ಮ ತಂದೆ ನಾಲ್ಕು ಬಾರಿ ಶಾಸಕರಾದರೂ ಹಣ ಆಸ್ತಿ ಮಾಡಲಿಲ್ಲ. ಚುನಾವಣೆ ಸ್ಪರ್ಧೆಯಲ್ಲಿ ಕೋಟ್ಯಾಂತರ ರೂ. ವ್ಯಹಿಸಬೇಕಾಗುತ್ತದೆ, ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನನಗೆ ಸ್ನೇಹಿತರು ಹೇಳಿದರು. ಆದರೆ ನಮ್ಮ ತಂದೆ ಹಾಗೂ ಕುಟುಂಬದವರು ಕ್ಷೇತ್ರದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದು, ಅವರಂತೆ ನಾನು ಕೂಡ ಜನ ಸೇವೆ ಮಾಡಲು ಮುಂದಾಗಿದ್ದು ಜನರ ನೆರವಿನೊಂದಿಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ನಮ್ಮ ತಂದೆ ಶಾಸಕರಾಗಿದ್ದ ಅವಧಿಯಲ್ಲಿ ಇಲ್ಲಿನ ರಸ್ತೆ ಹಾಗೂ ಕೆರೆ ಅಭಿವೃದ್ಧಿಗೆ ಸಾಕಷ್ಟು ನೆರವನ್ನು ನೀಡಿದರು ಎಂದು ಹೇಳಿದ ಅವರು ಸ್ಥಳೀಯ ಶಾಸಕರು 40% ಕಮಿಷನ್ ಆಧಾರದಲ್ಲಿ ಸಾಲಗಾಮೆಯಲ್ಲಿ ನಿರ್ಮಿಸಿದ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದೆ. ಆ ರೀತಿಯ ಕೆಲಸವನ್ನು ನಾನು ಮಾಡುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.