ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಪ್ರಕಾಶ್ ಸಾವಿರಾರು ಮಂದಿ ಕಾರ್ಯಕರ್ತರೊಡನೆ ರೋಡ್ ಶೋ ನಡೆಸಿದರು. ನಗರದ ಜಿಲ್ಲಾ ಕ್ರೀಡಾಂಗಣದಿಂದ ಹೊರಟ ರ್‍ಯಾಲಿಯಲ್ಲಿ ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಹಲವು ಮುಖಂಡರು ಸ್ವರೂಪ್ ಪ್ರಕಾಶ್ ಅವರಿಗೆ ಸಾಥ್ ನೀಡಿದರು.
ಜಿಲ್ಲಾ ಕ್ರೀಡಾಂಗಣದಿಂದ ಹೊರಟ ರ್‍ಯಾಲಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಬೆಳಗ್ಗೆ 10 ಗಂಟೆಯಿಂದಲೇ ಜಿಲ್ಲಾ ಕ್ರೀಡಾಂಗಣದ ಬಳಿ ಜಮಾಯಿಸುತ್ತಿದ್ದ ಸಾವಿರಾರು ಮಂದಿ ಪಕ್ಷದ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಹಾಸನ ವಿಧಾನಸಭಾ ಕ್ಷೇತ್ರದ ಜನರು ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಸಾಲಗಾಮೆ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಸ್ತೆಯ ಎರಡೂ ಬದಿ ಜಮಾಯಿಸಿದ್ದರು.
ರ್‍ಯಾಲಿಯಲ್ಲಿ ನೆರೆದಿದ್ದ ಯುವಕರು ಡಿಜೆ ಸಂಗೀತದೊಂದಿಗೆ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರ್‍ಯಾಲಿಯೊಂದಿಗೆ ಸಾಗಿದರು. ಸಾಲಗಾಮೆ ರಸ್ತೆಯಿಂದ ಅರಳಿಕಟ್ಟೆ ಸರ್ಕಲ್, ಮಹಾವೀರ ವೃತ್ತ, ಹೇಮಾವತಿ ಪ್ರತಿಮೆ ಎದುರಿನಿಂದ ಸಾಗಿ ಸಿಟಿ ಬಸ್ ಸ್ಟಾಂಡ್ ಮೂಲಕ ಎನ್ ಆರ್ ವೃತ್ತದಲ್ಲಿ ರ್‍ಯಾಲಿ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್. ಡಿ ಕುಮಾರಸ್ವಾಮಿ ಹಾಗೂ ಇತರ ನಾಯಕರನ್ನು ಬೃಹತ್ ಸೇಬಿನ ಹಾರ ಹಾಗೂ ಹೂವಿನ ಹಾರವನ್ನು ಹಾಕಿ ಸ್ವಾಗತಿಸಲಾಯಿತು. ರ್‍ಯಾಲಿಯುದ್ದಕ್ಕೂ ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಸ್ವರೂಪ್ ಪರ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಈ ವೇಳೆ ಭಾಗವಹಿಸಿದ್ದ ಕಾರ್ಯಕರ್ತರು ಜೆಡಿಎಸ್ ಬಾವುಟ ಹಾಗೂ ಶಾಲನ್ನು ಹೊದ್ದು ಪಕ್ಷದ ಪರ ಜೈಕಾರ ಹಾಕುವ ಮೂಲಕ ಮಧ್ಯಾಹ್ನ 3.30ರವರೆಗೂ ಸ್ವರೂಪ್ ಪರ ಬೆಂಬಲ ಸೂಚಿಸಿದರು.
ರ್‍ಯಾಲಿಯುದಕ್ಕೂ ರೋಡ್ ಶೋ ವಾಹನದಲ್ಲಿ ಇದ್ದ ಸ್ವರೂಪ್ ಪ್ರಕಾಶ್, ಭವಾನಿ ರೇವಣ್ಣ, ಪ್ರಜ್ವಲ್ ಹಾಗೂ ಕುಮಾರಸ್ವಾಮಿ ನೆರೆದಿದ್ದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಕೈ ಬೀಸಿ ನಮಸ್ಕಾರಿತ್ತಿದ್ದ ದೃಶ್ಯ ಕಂಡು ಬಂದಿತು. ರ್‍ಯಾಲಿಗೆ ಜನರನ್ನು ಕರೆ ತರಲು ಹಾಸನ ವಿಧಾನಸಭಾ ಕ್ಷೇತ್ರದ ಸುತ್ತಮುತ್ತ ನಿಗದಿತ ಸ್ಥಳಗಳಿಗೆ ಸುಮಾರು 300ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಬೆಳಿಗ್ಗೆ 10 ಗಂಟೆಯಿಂದ ಸಾಲಗಾಮೆ ರಸ್ತೆಯಲ್ಲಿ ಸ್ವರೂಪ್ ಪರ ನಿಂತಿದಂತಹ ಸಾರ್ವಜನಿಕರು ಮದ್ಯಾಹ್ನ ಎರಡು ಗಂಟೆಯವರೆಗೂ ಬಿಸಿಲಿನ ತಾಪದಲ್ಲಿ ಬಸವಳಿದು ಹೋದರು. ಈ ಸಂದರ್ಭದಲ್ಲಿ ನೆರಳನ್ನು ಆರಿಸಿ, ಮಹಾರಾಜ ಪಾರ್ಕ್ ಸೇರಿದಂತೆ ತಂಪಾದ ಮರದ ಕೆಳಗೆ ಹೋಗಿ ವಿರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸ್ವರೂಪ್ ಪರ ಆಯೋಜನೆ ಮಾಡಲಾಗಿದ್ದ ರೋಡ್ ಶೋನಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಜನರು ನಗರಕ್ಕೆ ಆಗಮಿಸಿದ್ದರು. ಬೆಳಿಗ್ಗೆಯಿಂದಲೂ ಬಿಸಿಲಿನ ತಾಪದಲ್ಲಿ ಕಾಲ ಕಳೆದಿದ್ದ ಜನರು ಮಧ್ಯಾಹ್ನದ ವೇಳೆಗೆ ಊಟ ಉಪಚಾರವಿಲ್ಲದೆ ತಮ್ಮ ತಮ್ಮ ಊರುಗಳಿಗೆ ಹೋಗಬೇಕಾಯಿತು. ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೆಚ್ಚಿನ ವೆಚ್ಚಗಳಿಗೆ ಕಡಿವಾಣ ಬಿದ್ದಿದೆ.