ಹಾಸನ: ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಹಾಸನ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಇಂದು ಸಾವಿರಾರು ಮಂದಿ ಕಾರ್ಯಕರ್ತರೊಡನೆ ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ಹೊರಟ ರ‍್ಯಾಲಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಬೆಳಗ್ಗೆ 9 ಗಂಟೆಯಿಂದಲೇ ನಗರದ ಸಾಲಗಾಮೆ ರಸ್ತೆ ಜಿಲ್ಲಾ ಕ್ರೀಡಾಂಗಣ ಎದುರು ಜಮಾಯಿಸಿದ ಹಾಸನ ವಿಧಾನಸಭಾ ಕ್ಷೇತ್ರದ ನಗರ ಹಾಗೂ ನಾನಾ ಗ್ರಾಮಗಳಿಂದ ಆಗಮಿಸಿದ ಕಾಂಗ್ರೆಸ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಾಲಿಗಾಮೆ ರಸ್ತೆಯಿಂದ ನಗರದ ಎನ್. ಆರ್. ವೃತ್ತದವರೆಗೆ ಸಾಗಿದರು.
ರ್‍ಯಾಲಿಯುದ್ದಕ್ಕೂ ಕಾಂಗ್ರೆಸ್ ಹಾಗೂ ರಂಗಸ್ವಾಮಿ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಹಾಸನ ವಿಧಾನಸಭೆ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿ ಸೇರಿದಂತೆ, ನಗರಸಭೆ ವ್ಯಾಪ್ತಿಯ ಬಡಾವಣೆಗಳ ಸಾವಿರಾರು ಕಾರ್ಯಕರ್ತರು ಬಸ್, ಟೆಂಪೊ, ಬೈಕ್ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಆಗಮಿಸುತ್ತಿದ್ದುದು ಕಂಡು ಬಂತು.
ಬೆಳಗ್ಗೆ 9.30 ಗಂಟೆಯಿಂದ ಜಮಾಯಿಸಲು ಆರಂಭವಾದ ಕಾರ್ಯಕರ್ತರ ಆಗಮನ 11 ಗಂಟೆ ವೇಳೆಗೆ ಜಿಲ್ಲಾ ಕ್ರೀಡಾಂಗಣದ ಎದುರಿನ ರಸ್ತೆ ಸಾವಿರಾರು ಸಂಖ್ಯೆಯ ಜನಜಂಗುಳಿಯಿಂದ ತುಂಬಿ ಹೋಗಿತ್ತು. ರ್‍ಯಾಲಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಕಾಂಗ್ರೆಸ್ ನ ಶಾಲನ್ನು ಹೊದ್ದು ಬಾವುಟವನ್ನು ಹಿಡಿದು ಪಕ್ಷದ ಪರ ಹಾಗೂ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಂಗಸ್ವಾಮಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರ ಪರ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂತು.
ಈ ನಡುವೆ ಸಹಸ್ರಾರು ಜನರ ಮಧ್ಯೆ ರೋಡ್ ಶೋನಲ್ಲಿ ಭಾಗವಹಿಸಿದ ರಂಗಸ್ವಾಮಿ, ಬಾಗೂರು ಮಂಜೇಗೌಡ ಹಾಗೂ ಇತರೆ ನಾಯಕರು ಪ್ರತಿಯೊಬ್ಬ ಕಾರ್ಯಕರ್ತರಿಗೆ ಹಾಗೂ ರಸ್ತೆಯ ಪಕ್ಕದಲ್ಲಿ ನಿಂತಿದ್ದಂತಹ ಸಾರ್ವಜನಿಕರಿಗೆ ಕೈ ಬೀಸಿ ಗೆಲುವಿನ ನಗೆ ಬೀರುತ್ತಾ ನಮಸ್ಕರಿಸುತ್ತಾ ಸಾಗಿದರು.