ಚನ್ನರಾಯಪಟ್ಟಣ: ಕಾಳೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಅವರು ಬಿರುಸಿನ ಮತಯಾಚನೆಯನ್ನು ಆರಂಭಿಸಿದರು.
ಮತಯಾಚನೆಗೆ ಆಗಮಿಸಿದ ಮಾಜಿ ಎಂಎಲ್‌ಸಿ ಗೋಪಾಲ ಸ್ವಾಮಿ ಅವರನ್ನು ಗ್ರಾಮದ ಗಡಿ ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು. ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗೋಪಾಲಸ್ವಾಮಿ ಅವರು ಶ್ರವಣಬೆಳಗೊಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ನನ್ನನ್ನು ಜಯಶೀಲನಾಗಿ ಆಯ್ಕೆ ಮಾಡಿ ನಿಮ್ಮೆಲ್ಲರ ಸೇವೆ ಮಾಡುವ ಸೌಭಾಗ್ಯವನ್ನು ನೀಡಬೇಕೆಂದು ಮನವಿ ಮಾಡಿದರು.
ಕಾಳೇನಹಳ್ಳಿ ಗ್ರಾಮದ ಮತದಾರ ಬಂಧುಗಳು ಈ ಬಾರಿ ನನ್ನನ್ನು ಬೆಂಬಲಿಸಿ, ಆಶೀರ್ವದಿಸಿ ವಿಧಾನಸೌಧಕ್ಕೆ ಕಳಿಸಿಕೊಡುವ ಮೂಲಕ ಚನ್ನರಾಯಪಟ್ಟಣ ತಾಲೂಕನ್ನು ಮಾದರಿ ತಾಲೂಕು ಮಾಡಲು ಒಂದು ಸುವರ್ಣ ಅವಕಾಶವನ್ನು ನೀಡಬೇಕು ಎಂದರು. ಹಾಲಿ ಶಾಸಕರಿಗೆ ಹತ್ತು ಹಲವು ಅಧಿಕಾರಗಳನ್ನು ನೀವುಗಳು ನೀಡಿದ್ದೀರಿ, ಸಾರಿಗೆ ಇಲಾಖೆಯ ಬಡ ನೌಕರರ ಮಗನಿಗೆ ಒಮ್ಮೆ ಅಧಿಕಾರವನ್ನು ನೀಡಿ ನೋಡಿ, ನಿಮ್ಮ ಗ್ರಾಮದ ಅಭಿವೃದ್ಧಿ ಕೆಲಸವನ್ನು ಮಾಡದೇ ಇದ್ದರೆ, ಆ ದಿನವೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ತಡರಾತ್ರಿ ಆದರೂ ಸಹ ಪ್ರತಿಯೊಬ್ಬರು ನನಗೆ ತೋರುತ್ತಿರುವ ಪ್ರೀತಿ ನೋಡಿದರೆ ತುಂಬಾ ಸಂತೋಷವಾಗುತ್ತಿದೆ ಎಂದರು. ಈ ಗ್ರಾಮದ ದೇವಸ್ಥಾನದ ಮೇಲ್ಚಾವಣಿಯನ್ನು ನನ್ನ ಅಧಿಕಾರದ ಅವಧಿಯಲ್ಲಿ ವಿಶೇಷ ಅನುದಾನ ನೀಡುವ ಮೂಲಕ ಪೂರ್ಣಗೊಳಿಸಿದ್ದೇನೆ. ಅದೇ ರೀತಿ ಗ್ರಾಮದ ಐ ಮಾಸ್ ಲೈಟ್ ಸೌಲಭ್ಯವನ್ನು ಸಹ ನನ್ನ ಎಂಎಲ್‌ಸಿ ಅನುದಾನದಲ್ಲಿ ನೀಡಿದ್ದೇನೆ, ಈ ಬಾರಿ ನನಗೆ ಅತ್ಯಧಿಕ ಮತ ನೀಡುವ ಮೂಲಕ ಆಶೀರ್ವಾದ ಮಾಡಿದರೆ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿಗಳ ಸಹಾಯಧನ ನೀಡುವ ಮೂಲಕ ದೇವಸ್ಥಾನದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಯುವರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಳೇನಹಳ್ಳಿ ಮಂಜುನಾಥ, ಸುಂಡಹಳ್ಳಿ ರಘು, ಸುಂಡಹಳ್ಳಿ ಜಯಕುಮಾರ, ಗ್ರಾಮದ ಹಿರಿಯ ಮುಖಂಡ ಮಂಜಪ್ಪ, ಜೆಡಿಎಸ್ ಯುವ ಮುಖಂಡ ಕೆ.ಕೆ ದಿನೇಶ, ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ, ಆನಂದ ಕುಮಾರ, ವರಲಕ್ಷ್ಮಿ ಕೃಷ್ಣ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಣ್ಣ, ಜೆಡಿಎಸ್ ಮುಖಂಡರುಗಳಾದ ಕುಮಾರ್, ಸತೀಶ್, ಶೇಖರ, ದಿನೇಶ, ಲೋಹಿತ, ಗುರುರಾಜ ಸೇರಿದಂತೆ ಇತರರು ಹಾಜರಿದ್ದರು.