ಕೊಣನೂರು: ಅರಕಲಗೂಡು ಕ್ಷೇತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಎ. ಮಂಜು ಘೋಷಿಸಿಕೊಂಡಿದ್ದಾರೆ.
ಸ್ವಗ್ರಾಮ ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿ ಕರೆದಿದ್ದ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿಕೊಂಡರು. ಸಭೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿದ ಅವರು ಇಷ್ಟು ದಿನ ನನ್ನೆಲ್ಲಾ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಹೇಳಿದ ಹಾಗೆ ನಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ನೀವುಗಳೂ ಸಹ ನನ್ನೊಂದಿಗೆ ಇರಬೇಕು ಎಂದು ಮನವಿ ಮಾಡಿದರು.
ಇಂದಿನಿಂದ ನಾವೆಲ್ಲರೂ ಜೆಡಿಎಸ್ ಪರವಾಗಿ ಪಕ್ಷಕ್ಕೆ ಸೇರಿ ಮಂಜು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ನಮ್ಮ ನಮ್ಮ ಊರುಗಳಲ್ಲಿ ನಾವೆಲ್ಲರೂ ಕೂಡ ಜೆಡಿಎಸ್. ನಾವು ಮಂಜಣ್ಣನವರನ್ನು ಜೆಡಿಎಸ್ ಪಕ್ಷದಿಂದ ಗೆಲ್ಲಿಸುತ್ತೇವೆ, ಇನ್ಮೇಲೆ ನಾವೆಲ್ಲರೂ ಜೆಡಿಎಸ್ ಎಂದು ಎ.ಮಂಜುರವರ ಜೊತೆ ಕೈ ಮುಂದೆ ಚಾಚಿ ನೂರಾರು ಮಂದಿ ಪ್ರಮಾಣ ಮಾಡಿದರು.
ಸಭೆಯ ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಎ.ಮಂಜುರವರಿಗೆ ಕಾರ್ಯಕರ್ತರು ಜೈಕಾರ ಕೂಗಿದರು.
ವರಿಷ್ಠರನ್ನು ಭೇಟಿ ಮಾಡಿದ್ದ ಎ.ಮಂಜು ಕಳೆದ ಕೆಲ ದಿನಗಳ ಹಿಂದೆ ಜೆಡಿಎಸ್‌ನ ವರಿಷ್ಠರಾದ ಎಚ್.ಡಿ.ದೇವೇಗೌಡರ ಆರೋಗ್ಯವನ್ನು ವಿಚಾರಿಸಲು ಬೆಂಗಳೂರಿನ ಹೆಚ್‌ಡಿಡಿ ನಿವಾಸಕ್ಕೆ ಮಾಜಿ ಸಚಿವ ಎ. ಮಂಜು ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿರವರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸಿ ಎಚ್.ಡಿ.ಡಿ ರವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಉಪಸ್ಥಿತರಿದ್ದರು.
ಮಾ. ೧೧ ಅಥವಾ ೧೨ರಂದು ಬೆಂಗಳೂರಿನಲ್ಲಿ ದೇವೇಗೌಡರ ಸಮ್ಮುಖದಲ್ಲಿ ಎ.ಮಂಜು ರವರು ಜೆಡಿಎಸ್ ಪಕ್ಷ ಸೇರಲಿದ್ದಾರೆ. ಮಾ. ೧೬ರಂದು ಅರಕಲಗೂಡು ತಾಲೂಕಿನಲ್ಲಿ ಪಂಚರತ್ನ ಯಾತ್ರೆ ಕಾರ್ಯಕ್ರಮ ನಡೆಯಲಿದೆ.