ಹೊಳೆನರಸೀಪುರ: ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ ತಿಳಿಸಿದರು.
ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ನಗರದ ೨೧ ಹಾಗೂ ೨೨ ವಾರ್ಡ್‌ನ ಮತದಾರರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನ್ನು ವಿತರಿಸಿ ಮಾತನಾಡಿದರು. ಸದೃಢ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಬೇಕು ಎಂದು ವಿನಂತಿಸಿದ ಅವರು, ಪಕ್ಷದ ಜನಪ್ರಿಯ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ೨೦೦೦ ರೂ. ನೀಡಲಾಗುತ್ತದೆ, ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಹಾಗೂ ಹಸಿದವರಿಗೆ ಹೊಟ್ಟೆ ತುಂಬ ಊಟ ಮಾಡಲು ಪಡಿತರರಿಗೆ ೧೦ ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಕೆ.ಹರೀಶ, ಪರಿಶಿಷ್ಟ ಜಾತಿ ಘಟಕದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ, ಸಾಮಾಜಿಕ ಜಾಲತಾಣ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಕಾಂಗ್ರೆಸ್ ಮುಖಂಡರುಗಳಾದ ಹೆಚ್.ಈ.ಹರಿರಾಜ್, ಎಚ್.ವಿ.ಕೃಷ್ಣ, ದೇವರಾಜು, ಮಧುಸೂದನ, ಎಚ್.ಡಿ. ರಮೇಶ, ಎಚ್.ಸಿ.ಕೇಶವಮೂರ್ತಿ, ಇತರರು ಹಾಜರಿದ್ದರು.